ನವದೆಹಲಿ: ಬಾಂಗ್ಲಾದೇಶದಲ್ಲಿನ ಪ್ರಸ್ತುತ ಸ್ಥಿತಿ ಮತ್ತು ಹಿಂದೂ ಸಮುದಾಯದವರ ಮೇಲೆ ನಡೆಯುತ್ತಿರುವ ಹಲ್ಲೆ ಸ್ಥಿತಿ ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು.
ನೆರೆ ರಾಷ್ಟ್ರದ ಬೆಳವಣಿಗೆಗಳನ್ನು ಭಾರತ ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಜಮೈತ್-ಉಲೇಮಾ-ಎ-ಇಸ್ಲಾಂ ಮತ್ತು ಇತರೆ ಸಂಘಟನೆಗಳು ದೇಶದಲ್ಲಿ ಇಸ್ಕಾನ್ ನಿಷೇಧಿಸಲು ಪಟ್ಟುಹಿಡಿದಿವೆ. ಆದರೆ, ಇನ್ನೊಂದೆಡೆ ಬಂಧಿತ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಜೊತೆಗೆ ಸಂಪರ್ಕ ಕುರಿತು ಬಾಂಗ್ಲಾದ ಇಸ್ಕಾನ್ ಅಂತರವನ್ನು ಕಾಯ್ದುಕೊಂಡಿದೆ.
'ಬಂಧಿತ ಸನಾತನ ಧಾರ್ಮಿಕ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು' ಸದ್ಯ ಭಾರತದಲ್ಲಿ ಇರುವ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಬಾಂಗ್ಲಾದ ಮಧ್ಯಂತರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿರುವ ಅವರು, ಹಿಂದೂ ಮುಖಂಡನ ಬಂಧನ ಅಸಾಂವಿಧಾನಿಕ ಎಂದು ಟೀಕಿಸಿದ್ದಾರೆ. ಅಲ್ಲದೆ, ವಕೀಲ ಸೈಫುಲ್ ಇಸ್ಲಾಂ ಹಲೀಫ್ ಹತ್ಯೆಯನ್ನು ಶೇಖ್ ಹಸೀನಾ ವರು ಖಂಡಿಸಿದ್ದಾರೆ.
ಈ ಮಧ್ಯೆ, ಇಸ್ಕಾನ್ ಅನ್ನು ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಬಾಂಗ್ಲಾದೇಶದ ಹೈಕೋರ್ಟ್ ವಜಾ ಮಾಡಿದೆ. ಈ ಕುರಿತು ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದೆ.
ಇಸ್ಕಾನ್ ನಿಷೇಧಿಸಬೇಕು ಎಂದು 'ಜಮೈತ್ ಉಲೇಮಾ ಇ ಇಸ್ಲಾಂ ಬಾಂಗ್ಲಾದೇಶ' ಸಂಘಟನೆಯ ಉಪಾಧ್ಯಕ್ಷ ಅಬ್ದುಲ್ ರಾಬ್ ಯೂಸುಫ್ ಮತ್ತು ಇತರೆ ಮುಖಂಡರು ಪುನರುಚ್ಚರಿಸಿದ್ದಾರೆ.
ಬಾಂಗ್ಲಾ ಇಸ್ಕಾನ್‌ನ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ್ ಬ್ರಹ್ಮಚಾರಿ, 'ಶಿಸ್ತು ಉಲ್ಲಂಘಿಸಿದ್ದಕ್ಕೆ ಚಿನ್ಮಯಿ ಅವರನ್ನು ಹಿಂದೆಯೇ ಎಲ್ಲ ಹೊಣೆಗಳಿಂದ ಮುಕ್ತಗೊಳಿಸಲಾಗಿದೆ. ಚಿನ್ಮಯಿ ಅವರಿಗೂ ಇಸ್ಕಾನ್‌ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.