ಕಾಸರಗೋಡು: ಹದಿನೆಂಟು ವರ್ಷಗಳ ಹಿಂದೆ ಕೊಲೆಗೈಯಲ್ಪಟ್ಟಿರುವ ಮೂಲತ: ಕೊಡಗು ಅಯ್ಯಂಗೇರಿ ನಿವಾಸಿ ಸಫಿಯಾಳ ತಲೆಬುರುಡೆ ಸೇರಿದಂತೆ ಆಕೆಯ ಅಸ್ಥಿಪಂಜರ ಆಕೆ ಹೆತ್ತವರಿಗೆ ಒಪ್ಪಿಸಲು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಾನು ಎಸ್. ಪಣಿಕ್ಕರ್ ಆದೇಶಿಸಿದ್ದಾರೆ.
ಸಫಿಯಾಳ ತಲೆಬುರುಡೆ ಸೇರಿದಂತೆ ಅಸ್ಥಿಪಂಜರವನ್ನು ನ್ಯಾಯಾಲಯ ಪ್ರಧಾನ ಪುರಾವೆಯನ್ನಾಗಿ ಪರಿಗಣಿಸಿ, ಇಂದಿಗೂ ಸಂರಕ್ಷಿಸಿಟ್ಟುಕೊಳ್ಳಲಾಗಿದೆ. ಇದನ್ನು ಮತೀಯ ಆಚರಣೆಯಂತೆ ಸಂಸ್ಕಾರ ನಡೆಸಲು ಬಿಟ್ಟುಕೊಡುವಂತೆ ಸಫಿಯಾಳ ತಂದೆ ಮೊಯ್ದು ಹಾಗೂ ತಾಯಿ ಆಯಿಷಮ್ಮ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿ ಪರಿಶೀಲಿಸಿ ಈ ಆದೇಶ ನೀಡಿದೆ. ನ್ಯಾಯಾಲಯದ ಮುಖಾಂತರ ನ. 7ರಂದು ಅಸ್ಥಿಪಂಜರವನ್ನು ಸಫಿಯಾ ಹೆತ್ತವರು ಪಡೆದುಕೊಳ್ಳಲಿದ್ದಾರೆ.
ಮುಳಿಯಾರು ನಿವಾಸಿ ಹಾಗೂ ಗೋವಾದಲ್ಲಿ ನಿರ್ಮಾಣಗುತ್ತಿಗೆದಾರನಾಗಿದ್ದ ಕೆ.ಸಿ ಹಂಸ ಮತ್ತು ಆತನ ಪತ್ನಿ ಮೈಮುನಾ ಗೋವಾದಲ್ಲಿರುವ ಅವರ ಮನೆ ಕೆಲಸಕ್ಕೆ 2006ಲ್ಲಿ ಸಫಿಯಾಳನ್ನು ಕರೆದೊಯ್ದು ದೈಹಿಕ ಹಿಂಸೆ ನೀಡಲಾಗಿತ್ತು, ಅಲ್ಲದೆ ಆಕೆ ಮೈಮೇಲೆ ಬಿಸಿ ನೀರು ಬಿದ್ದ ಪರಿಣಾಮ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಈಕೆಯನ್ನು ಕೊಲೆಗೈದು ಮೃತದೇಹ ತುಂಡರಿಸಿ ಗೋವಾದಲ್ಲಿ ನಿರ್ಮಾಣಹಂತದಲ್ಲಿದ್ದ ಅಣೆಕಟ್ಟಿನ ಬಳಿ ದಫನಮಾಡಿರುವ ಬಗ್ಗೆ ಕೇಸು ದಾಖಲಾಗಿತ್ತು. ಇದಕ್ಕೂ ಮೊದಲು ಸಫಿಯಾ ನಾಪತ್ತೆಯಾಗಿರುವ ಬಗ್ಗೆ ಆದೂರು ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದರು. ಕ್ರೈಂ ಬ್ರಾಂಚ್ ನಡೆಸಿದ ತನಿಖೆಯಿಂದ 2008 ಜೂ. 5ರಂದು ಅಣೆಕಟ್ಟು ಸನಿಹದಿಂದ ಸಫಿಯಾಳ ಅಸ್ಥಿಪಂಜರ ಪತ್ತೆಚ್ಚಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ನಂತರ ಈ ಶಿಕ್ಷೆಯನ್ನು ಹೈಕೋರ್ಟು ಜೀವಾವಧಿ ಶಿಕ್ಷೆಯಾಗಿ ಕಡಿತಗೊಳಿಸಿತ್ತು.