ಬೀಜಿಂಗ್: ಬೇಹುಗಾರಿಕೆ ಆರೋಪ ಸಾಬೀತಾಗಿದೆ ಎಂದು ಚೀನಾದ ಖ್ಯಾತ ಪತ್ರಕರ್ತರೊಬ್ಬರು ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
62 ವರ್ಷದ ಪತ್ರಕರ್ತ ಡಾಂಗ್ ಯುಯು ಎನ್ನುವರೇ ಜೈಲು ಶಿಕ್ಷೆಗೆ ಒಳಗಾದವರು. ಈ ಕುರಿತು ಬಿಬಿಸಿ ಸುದ್ದಿವಾಹಿನಿ ವರದಿ ಮಾಡಿದೆ.
ಜಪಾನ್ ಮತ್ತು ಅಮೆರಿಕದ ಮಾಧ್ಯಮ ಸಂಸ್ಥೆಗಳ ಜೊತೆ ಮತ್ತು ಅಲ್ಲಿನ ಹಿರಿಯ ಪತ್ರಕರ್ತರ ಜೊತೆ ಡಾಂಗ್ ಸದಾ ಸಂಪರ್ಕದಲ್ಲಿರುತ್ತಿದ್ದರು. ಈ ಮೂಲಕ ಅವರು ಬೇಹುಗಾರಿಕೆ ಮಾಡುತ್ತಿದ್ದರು ಎನ್ನುವ ಆರೋಪವನ್ನು ಚೀನಾ ಸರ್ಕಾರ ಅವರ ಮೇಲೆ ಹೊರಿಸಿತ್ತು.
ಪ್ರಾಥಮಿಕ ವಿಚಾರಣೆ ಬಳಿಕ 2022 ಫೆಬ್ರುವರಿಯಲ್ಲಿ ಡಾಂಗ್ ಅವರನ್ನು ಚೀನಾ ಪೊಲೀಸರು ಬಂಧಿಸಿದ್ದರು. ಸದ್ಯ ಅವರಿಗೆ ನ್ಯಾಯಾಲಯ ಏಳು ವರ್ಷ ಶಿಕ್ಷೆ ವಿಧಿಸಿರುವುದನ್ನು ಡಾಂಗ್ ಕುಟುಂಬದವರು ಬಿಬಿಸಿ ವಾಹಿನಿಗೆ ಖಚಿತಪಡಿಸಿದ್ದಾರೆ.
ಡಾಂಗ್ ಅವರ ಮೇಲೆ ಆರೋಪ ಕೇಳಿ ಬಂದಾಗ ಅವರು ಚೀನಾದ ಕೆಲವು ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾದ ಗುನಾಂಗ್‌ಮಿಂಗ್ ಡೈಲಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮುನ್ನ ಚೀನಾ ಸರ್ಕಾರದ ಅಧಿಕೃತ ಮಾಧ್ಯಮವಾದ ಚೀನಾ ಸ್ಟೇಟ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದರು.
ಡಾಂಗ್ ಅವರ ಬಂಧನವಾಗಿದ್ದಾಗ ಅದನ್ನು ಜಪಾನ್ ಪತ್ರಕರ್ತರು ಬಹಿರಂಗವಾಗಿ ಖಂಡಿಸಿದ್ದರು.