ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆಯನ್ವಯ ಹೊಸಬಸ್‍ನಿಲ್ದಾಣ ಸನಿಹ ನುಳ್ಳಿಪ್ಪಾಡಿಯಲ್ಲಿ ಅಂಡರ್‍ಪ್ಯಾಸೇಜ್ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ದೀರ್ಘ ಕಾಲದಿಂದ ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ 'ಕಾಸರಗೋಡಿನ ಕನ್ನಡಿಗರು'ವಾಟ್ಸಪ್ ಗ್ರೂಪ್ ಹಾಗೂ ಕನ್ನಡ ಜಾಗ್ರತಿ ಸಮಿತಿ ತನ್ನ ಬೆಂಬಲ ನೀಡಿದೆ.
ಕಳೆದ ಹಲವು ದಿವಸಗಳಿಂದ ನಡೆದುಬರುತ್ತಿರುವ ಧರಣಿ ಮುಷ್ಕರದಲ್ಲಿ ಸಂಘಟನೆ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. 'ಕಾಸರಗೋಡಿನ ಕನ್ನಡಿಗರು'ವಾಟ್ಸಪ್ ಬಳಗದ ಎಡ್ಮಿನ್ ಜಯನಾರಾಯಣ ತಾಯನ್ನೂರ್ ಮಾತನಾಡಿ, ಆಸ್ಪತ್ರೆ, ಆರಾಧನಾಲಯ, ರುದ್ರಭೂಮಿ ಹೊಂದಿದ್ದು, ಹೆಚ್ಚಿನ ಪ್ರಾಧಾನ್ಯತೆಯಿಂದ ಕೂಡಿರುವ ಪ್ರದೇಶದಲ್ಲಿ ಅಂಡರ್‍ಪ್ಯಾಸೇಜ್ ನಿರ್ಮಾಣಕ್ಕೆ ಸರ್ಕಾರ ಆದ್ಯ ಗಮನ ಹರಿಸಬೇಕು. ಈ ಮೂಲಕ ನಾಡಿನ ಜನತೆಯ ನ್ಯಾಯಯುತ ಬೇಡಿಕೆ ಈಡೆರಿಸಿಕೊಡುವಂತೆ ಆಗ್ರಹಿಸಿದರು. ಕನ್ನಡ ಜಾಗೃತಿ ಸಮಿತಿ ಪ್ರತಿನಿಧಿಗಳಾದ ಗುರುಪ್ರಸಾದ್ ಕೋಟೆಕಣಿ, ಪತ್ರಕರ್ತ ಪ್ರದೀಪ್ ಬೇಕಲ್, ಯೋಗೀಶ್ ಕೋಟೆಕಣಿ, ದಿವಾಕರ ಅಶೋಕನಗರ, ಭರತ್, ಮೋಹನ್ ರಾವ್, ಕೇಶವ ನುಳ್ಳಿಪ್ಪಾಡಿ ಮೊದಲಾದವರು ಪ್ರತಿಭಟನಾ ಚಪ್ಪರಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.