ಕುಂಬಳೆ: ಕೆಲಸ ಅರಸಿ ಬಂದ ಪಶ್ಚಿಮಬಂಗಾಳ ನಿವಾಸಿಯೊಬ್ಬ, ವೇಷಪಲ್ಲಟಗೊಳಿಸಿ ಬಿಕ್ಷಾಟನೆಯಲ್ಲಿ ನಿರತನಾಗಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಪೊಲೀಸ್ ಅತಿಥಿಯಾದ ಘಟನೆ ಕುಂಬಳೆಯಲ್ಲಿ ನಡೆದಿದೆ. ಬುರ್ಖಾಧಾರಿಯಾಗಿ ಭಿಕ್ಷಾಟನೆಗಿಳಿದಿದ್ದ ಪಶ್ಚಿಮ ಬಂಗಾಳ ನಾದಿಯಾದ ಗಾಲಾನಬಿಯಾ ನಿವಾಸಿ ನಸೀಬುಲ್(30) ಬಂಧಿತ.
ಕೆಲವು ವಾರಗಳ ಹಿಂದೆ ಕುಂಬಳೆಗೆ ಆಗಮಿಸಿದ್ದ ಈತ ವಿವಿಧೆಡೆ ಕೆಲಸ ಅರಸಿ ತೆರಳಿದ್ದರೂ, ಯಾವುದೇ ಕೆಲಸ ಲಭಿಸದಾದಾಗ ಭಿಕ್ಷೆ ಬೇಡಲು ಮುಂದಾಗಿದ್ದನು. ಕೆಲವೊಂದು ಮನೆಗಳಿಗೆ, ವ್ಯಪಾರಿ ಸಂಸ್ಥೆಗಳಿಗೆ ತೆರಳಿ ಭಿಕ್ಷೆ ಬೇಡಿದರೂ, ನಿರೀಕ್ಷಿತ ಮೊತ್ತ ಲಭಿಸದಾದಾಗ ಬುರ್ಖಾ ಖರೀದಿಸಿ ಮಹಿಳೆಯಾಗಿ ವೇಷಪಲ್ಲಟಗೊಳಿಸಿ ಭಿಕ್ಷಾಟನೆ ಆರಂಭಿಸಿದ್ದಾನೆ. ಮಾತು ಬಾರದವರಂತೆ ನಟಿಸಿ, ಮನೆಯಲ್ಲಿದ್ದ ಮಹಿಳೆಯರ ಕರುಣೆ ಗಿಟ್ಟಿಸಿ, ಪ್ರತಿ ಮನೆಯಿಂದ 10ರಿಂದ ಐವತ್ತು ರೂ. ವರೆಗೂ ಗಳಿಸುತ್ತಿದ್ದನು. ಬುರ್ಖಾ ಧರಿಸಿ, ಕೈ, ಕಾಲುಗಳಿಗೆ ಸಾಕ್ಸ್ ಅಳವಡಿಸಿ, ಮಾತುಬಾರದವರಂತೆ ಆಂಗಿಕ ಭಾಷೆಯಲ್ಲಿ ಮನೆಯವರೊಂದಿಗೆ ಸಂವಹನ ನಡೆಸುತ್ತಿದ್ದನು. ಸಾರ್ವಜನಿಕ ಪ್ರದೇಶದಲ್ಲೂ ಸಂಶಯ ಬಾರದಿರಲೆಂದು ಮಹಿಳೆಯರಿದ್ದಲ್ಲೇ ಹೆಚ್ಚಾಗಿ ನಿಲ್ಲುತ್ತಿದ್ದನು. ಗುರುವಾರ ಸಂಜೆ ಕುಂಬಳೆ ಬಸ್ ನಿಲ್ದಾಣ ತಲುಪಿದ್ದ ಈತನ ಚಲನವಲನದಿಂದ ಸಂಶಯಗೊಂಡ ಮಹಿಳೆಯರು ಸೂಕ್ಷ್ಮವಾಗಿ ಗಮನಿಸಿದಾಗ ಈತ ಪುರುಷರ ಚಪ್ಪಲಿ ಧರಿಸಿರುವುದು ಕಂಡುಬಂದಿತ್ತು. ತಕ್ಷಣ ಆಸುಪಾಸಿನವರಿಗೆ ಮಾಹಿತಿ ನೀಡಿ, ಈತನನ್ನು ವಿಚಾರಿಸಿದಾಗ ಕಪಟತನ ಬೆಳಕಿಗೆ ಬಂದಿದೆ. ಗೂಸಾ ನೀಡಿದ ಸ್ಥಳೀಯರು ನಂತರ ಈತನನ್ನು ಪೊಲಿಸರಿಗೊಪ್ಪಿಸಿದ್ದರು.
ಬುರ್ಖಾದ ಮರೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಈತ ಮುಂದೊಂದು ದಿನ ಇದಕ್ಕಿಂತ ಗಂಭೀರ ಅಪರಾಧ ನಡೆಸಲೂ ಹೇಸುತ್ತಿರಲಿಲ್ಲ ಎಂಬುದಾಗಿ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉದ್ಯೋಗ ಅರಸಿಕೊಂಡು ಬರುತ್ತಿರುವ ಇತರ ರಾಜ್ಯ ಕಾರ್ಮಿಕರು ಕೊಲೆ, ದರೋಡೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಹಲವು ಪ್ರಕರಣ ಕೇರಳದ ವಿವಿಧ ಠಾಣೆಗಳಲ್ಲಿ ದಾಖಲಾಗಿದೆ.