HEALTH TIPS

ಬೇಕಲ ರಾಮ ನಾಯಕರ ಬದುಕು-ಬರಹ ಎಂದಿಗೂ ದಾರಿದೀಪ-ರಾಧಾಕೃಷ್ಣ ಕೆ.ಉಳಿಯತ್ತಡ್ಕ: ಕನ್ನಡ ಚಿಂತನದಲ್ಲಿ ಅಭಿಮತ

ಮಂಜೇಶ್ವರ: ಇತಿಹಾಸ ವಿಚಾರಗಳನ್ನು ಕಥಾರೂಪದಲ್ಲಿ ನಿರೂಪಿಸಿ ಪರಂಪರೆಯ ಸ್ವರೂಪಕ್ಕೆ ಹೊಸ ಆಯಾಮ ನೀಡಿದವರು ಬೇಕಲ ರಾಮ ನಾಯಕರು. ವಿಸ್ತಾರವಾದ ಸಂಶೋಧನೆ, ಅಧ್ಯಯನ ಹಾಗೂ ಸಾಹಿತ್ಯ ನಿರೂಪಣೆಯ ಶ್ರೀಮಂತ ಶೈಲಿಯ ಮೂಲಕ ನಾಯಕರ ಬದುಕು-ಬರಹ ಅವಿನಾಶಿ ಎಂದು ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಆಶ್ರಯದಲ್ಲಿ ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಲೈಬ್ರರಿ ಮಂಜೇಶ್ವರ ನೇತೃತ್ವದಲ್ಲಿ ಮಂಜೇಶ್ವರ ಗಿಳಿವಿಂಡಲ್ಲಿ ಬುಧವಾರ ಅಪರಾಹ್ನ ಆಯೋಜಿಸಲಾಗಿದ್ದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಬೇಕಲ ರಾಮ ನಾಯಕ ಅವರ ಕುರಿತಾದ ವಿಚಾರ ಸಂಕಿರಣದಲ್ಲಿ ಮುಖ್ಯ ಉಪನ್ಯಾಸ ನೀಡಿ ಅವರು ಮಾತನಾಡಿದರು.


ಬೇಕಲ ರಾಮನಾಯಕರು ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದರೂ, ತಮ್ಮ ಪರಿಶ್ರಮವನ್ನು ಧಾರೆಯೆರೆದು ಕೋಟೆ ಕೊತ್ತಲಗಳ ಬಗೆಗೆ ಸಂಶೋಧನಾತ್ಮಕ ಬರಹಗಳನ್ನು ಬರೆದು ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಮಹನೀಯರು. ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ನಂತರ ಐದು ವರ್ಷಗಳ ಕಾಲ ಕೋಟೆಕೊತ್ತಲಗಳು, ವೀರಗಲ್ಲು, ಮಾಸ್ತಿಕಲ್ಲು, ಶಾಸನಗಳ ಅಧ್ಯಯನ ಕೈಗೊಂಡರು. ತಾವು ಬೆಳೆದ ಪರಿಸರ ಕೋಟೆಕೊತ್ತಲಗಳ ನಾಡಾಗಿದ್ದುದು, ಆ ಕುರಿತು ರಾಮನಾಯಕರಿಗೆ ಕುತೂಹಲ ಹುಟ್ಟಿತು.  ಜೊತೆಗೆ ರಾಮನಾಯಕರ ವಂಶಸ್ಥರು ರಾಮಕ್ಷತ್ರಿಯ ಪಂಗಡಕ್ಕೆ ಸೇರಿದ ಯುದ್ಧಗಳಲ್ಲಿ, ಕೋಟೆಕೊತ್ತಲಗಳ ರಕ್ಷಣೆಯಲ್ಲಿ ನಿರತರಾದ ಜನಾಂಗವಾಗಿದ್ದು  ಆ ಕುರಿತು ವಿಶೇಷಾಧ್ಯಯನದಲ್ಲಿ ತೊಡಗಿಕೊಳ್ಳುವಲ್ಲಿ ಅವರನ್ನು ಪ್ರೇರಿಸಿತು ಅಧ್ಯಯನ,ಅಧ್ಯಾಪನಗಳೆರಡರಲ್ಲೂ ತೊಡಗಿದ್ದ ರಾಮನಾಯಕರು ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಗಳಿಸಿದರು. 

ಹೈಸ್ಕೂಲಿನಲ್ಲಿದ್ದಾಗಲೇ ಎಲ್ಲ ವಿಷಯಗಳನ್ನೂ ತೀಕ್ಷ್ಣವಾಗಿ ಗಮನಿಸುವ ಸ್ವಭಾವದವರಾಗಿದ್ದ ನಾಯಕರು, ಅಧ್ಯಾಪಕರಾಗಿದ್ದ ಐರೋಡಿ ಶಿವರಾಮಯ್ಯ (1874-1941) ಅವರಿಂದ ಸಾಹಿತ್ಯದ ಪ್ರೇರಣೆ ಪಡೆದು ಹಲವಾರು ಕೃತಿಗಳನ್ನು ರಚಿಸಿದರು. ಕಾಸರಗೋಡಿಗೆ ಸಂಬಂಧಿಸಿದ ಐತಿಹ್ಯಗಳನ್ನು ಸಂಗ್ರಹಿಸಿ ಕೋಟೆಯ ಕತೆಗಳು, ಬಾಳಿದ ಹೆಸರು ಮತ್ತು ಇತರ ಐತಿಹ್ಯಗಳು, ಪುಳ್ಕೂರು ಬಾಚ, ಕೆಚ್ಚಿನ ಕಿಡಿಗಳು, ನಾಡಕತೆಗಳು ಮತ್ತು ತೆಂಕನಾಡ ಐತಿಹ್ಯಗಳು ಎಂಬ ಆರು ಕಥಾ ಸಂಗ್ರಹಗಳನ್ನು ಪ್ರಕಟಿಸಿದರು. ಐತಿಹ್ಯಗಳನ್ನು ಸಂಗ್ರಹಿಸಿ ಕಥೆ ಬರೆದಂತೆ ಹಲವಾರು ನಾಟಕಗಳ ರಚನೆಗಳಲ್ಲಿಯೂ ತೊಡಗಿಕೊಂಡು ತೌಳವ ಸ್ವಾತಂತ್ರ್ಯ, ಕೇತುಭಂಗ (ಧ್ವಜ ವಂದನೆ) ಸೌಭಾಗ್ಯರತ್ನ, ಸತ್ಯಪರೀಕ್ಷೆ, ರತ್ನಹಾರ, ಉತ್ಕಲ ಕುಮಾರಿ, ವೀರ ವಸುಂಧರೆ, ಪ್ರೇಮಲತೆ ಎಂಬ ಎಂಟು ನಾಟಕಗಳನ್ನು ರಚಿಸಿದರು. ಇವುಗಳಲ್ಲಿ ಸಾಮಾಜಿಕ ವಸ್ತುವಾಗುಳ್ಳ ಪ್ರೇಮಲತೆ ಹಾಗೂ ಜಾನಪದ ಗೀತನಾಟಕವಾದ ಸತ್ಯಪರೀಕ್ಷೆಯನ್ನು ಬಿಟ್ಟರೆ ಉಳಿದೆಲ್ಲ ನಾಟಕಗಳೂ ಚಾರಿತ್ರಿಕ ವಸ್ತುಗಳಿಂದ ಕೂಡಿವೆ. ಮತೀಯ ಸಾಮರಸ್ಯ, ದೇಶಪ್ರೇಮ, ನಾಡ ಸಂಸ್ಕøತಿಯ ಬಗ್ಗೆ ಅಭಿಮಾನ ಮೂಡಿಸುವ ಗೀತೆಗಳಿಂದ ಕೂಡಿದ ನಾಟಕಗಳನ್ನು ಶಾಲಾಮಕ್ಕಳು ಅಭಿನಯಿಸುವ ಸಲುವಾಗಿಯೇ ಅವರು ರಚಿಸಿದರು. ದೀರ್ಘಕಾಲ ಅಧ್ಯಾಪನದಲ್ಲಿ ತೊಡಗಿಕೊಂಡಿದ್ದ ನಾಯಕರು, ಸಹಜವಾಗಿ ಮಕ್ಕಳು ಆಕರ್ಷಿತರಾಗುವುದು ಲಯಬದ್ಧ, ಪ್ರಾಸಬದ್ಧ ಹಾಡುಗಳಿಂದ ಎಂಬ ಅರಿವಿನಿಂದ ಹಲವಾರು ಪದ್ಯಗಳನ್ನು ರಚಿಸಿ ‘ಸಚಿತ್ರಬಾಲಗೀತೆ’ ಎಂಬ ಸಂಕಲನ ಮೂಡಿಸಿದರು ಎಮದವರು ವಿಸ್ತಾರವಾಗಿ ವಿವರಿಸಿದರು.

ಲೈಬ್ರರಿಯ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಕಲ ರಾಮ ನಾಯಕರು ಕಳೆದ ಶತಮಾನದ ಆರಂಭ ಕಾಲದಲ್ಲಿ ನಡೆಸಿದ್ದ ಅಧ್ಯಯನ, ಬರಹಗಳಿಂದ ಕಾಸರಗೋಡಿನ ಇತಿಹಾಸದ ಹೊಸ ತಿಳುವಳಿಕೆಗಳು ಇಂದಿನ ಸಮಾನಕ್ಕೆ ಲಭಿಸುವಂತಾಯಿತು. ಇಲ್ಲಿಯ ನೂರಾರು ಸಾಧಕರ ಅವಿಶ್ರಾಂತ ಸಾಧನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಪರಿಚಯಿಸುವ ಚಟುವಟಿಕೆಗಳು ನಡೆಯಲಿವೆ ಎಂದರು. 

ಲೈಬ್ರರಿಯ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಯಂತ ಮಾಸ್ತರ್ ವಂದಿಸಿದರು. ದಿವಾಕರ ಕಾಸರಗೋಡು ಅವರಿಂದ ಗಾಯನ ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries