ಮುಳ್ಳೆರಿಯ: ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲಾಗುತ್ತಿರುವ ಆಡಳಿತ ವರ್ಗದ ಮಲತಾಯಿ ಧೋರಣೆ ವ್ಯಾಪಕವಾಗಿ ಮುಂದುವರಿಯುತ್ತಿದ್ದು, ಇಲ್ಲಿಯ ಭಾಷಾ ಅಲ್ಪಸಂಖ್ಯಾಕ ಜನರ ಬವಣೆಗೆ ಕೊನೆಯಿಲ್ಲದಾಗಿದೆ. ಕಾಲೇಜು, ಹೈಸ್ಕೂಲು, ಪ್ರಾಥಮಿಕ ವಿಭಾಗಗಳ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಿಸಿ ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಗೋಳು ಹೊಯ್ಯುತ್ತಿರುವ ಕೇರಳ ಸರ್ಕಾರ ಇದೀಗ ಅಂಗನವಾಡಿ ಶಾಲೆ ಶಿಕ್ಷಕಿಯರ ನೇಮಕದಲ್ಲೂ ಅನ್ಯಾಯವೆಸಗಿದ ಘಟನೆ ಯಾವುದೇ ಪರಿಹಾರ ಕಾಣದೆ ತೀವ್ರ ವಿಕೋಪಕ್ಕೆ ತಿರುಗಿದೆ..
ಗಡಿನಾಡು ಅಂಗನವಾಡಿ ಶಾಲೆಗಳಲ್ಲಿ ದ್ವಿಭಾಷೆ ಗೊತ್ತಿರುವ ಶಿಕ್ಷಕಿಯ ನೇಮಕ ಮಾಡುವ ಬದಲಾಗಿ ಕೇವಲ ಮಲಯಾಳ ಮಾತ್ರವೇ ಬಲ್ಲ ಶಿಕ್ಷಕಿಯನ್ನು ನೇಮಿಸಿರುವುದು ಇದೀಗ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಕಾರಡ್ಕ ಬ್ಲಾಕ್ ವ್ಯಾಪ್ತಿಯ ಗಡಿಗ್ರಾಮ ದೇಲಂಪಾಡಿ ಪಂಚಾಯತಿಯ ಅಡೂರು ಸಮೀಪದ ಕೋರಿಕಂಡ ಎಂಬಲ್ಲಿಯ ಅಂಗನವಾಡಿಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಮಲೆಯಾಳಿ ಶಿಕ್ಷಕಿಯನ್ನು ನೇಮಿಸಿರುವುದು ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಲೇರಿದೆ.
ಅಂಗನವಾಡಿ ನಿರ್ವಹಣಾ ಸಮಿತಿ(ಎ.ಎಲ್.ಎನ್.ಎಸ್ ಕಮಿಟಿ)ನೇತೃತ್ವದಲ್ಲಿ ಅಶೋಕ ಸರಳಾಯ ನೇತೃತ್ವದಲ್ಲಿ 15 ಮಂದಿಯ ಸಮಿತಿ ಇದೀಗ ಕಾನೂನು ಹೋರಾಟದ ಹಾದಿ ಹಿಡಿದಿದೆ. ಈ ನಿಟ್ಟಿನಲ್ಲಿ ಕಳೆದ ಬುಧವಾರ ಎರ್ನಾಕುಳಂನಲ್ಲಿರುವ ರಾಜ್ಯ ಉಚ್ಚ ನ್ಯಾಯಾಲಯದಲಲಿ ದಾವೆ ಹೂಡಲಾಗಿದೆ. ಸಮಿತಿ ಸದಸ್ಯರಾದ ಗಂಗಾಧರ ಅಡೂರು ಹಾಗೂ ನಯನ ಅವರು ಹೈಕೋರ್ಟ್ ನ್ಯಾಯಾಧೀಶರಾದ ಅನೂಪ್ ಅವರ ಮೂಲಕ ಈ ದಾವೆ ಹೂಡಿದೆ. ಜೊತೆಗೆ ನ್ಯಾಯಾಲಯ ಖರ್ಚುವೆಚ್ಚ ನಿರ್ವಹಣೆಗೆ ಕೋರಿಕಂಡ ಅಂಗನವಾಡಿ ರಕ್ಷಣಾ ಸಮಿತಿ ರೂಪೀಕರಿಸಿ ದಾವೆ ನಿರ್ವಹಣೆಯನ್ನು ಮುನ್ನಡೆಸಲಿದೆ.
ಪ್ರಕರಣದ ಹಿನ್ನೆಲೆ:
ಕನ್ನಡ, ತುಳು ಭಾಷಿಕರೇ ಹೆಚ್ಚಿರುವ ದೇಲಂಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಅಡೂರಿನ ಕೋರಿಕಂಡ ಅಂಗನವಾಡಿಯಲ್ಲಿ ಒಟ್ಟು 16 ಮಕ್ಕಳಿದ್ದು ಅವರಲ್ಲಿ 14 ಮಂದಿ ಕನ್ನಡ/ತುಳು ಭಾಷಿಗರು. ಇಲ್ಲಿನ ಶಿಕ್ಷಕಿ ಅನಾರೋಗ್ಯ ಕಾರಣ ರಜೆಯಲ್ಲಿರುವುದರಿಂದ ಆರು ತಿಂಗಳ ಅವಧಿಗೆ ಮಲಯಾಳಂ ಭಾಷಿಗ ಶಿಕ್ಷಕಿಯನ್ನು ನೇಮಿಸಲಾಗಿದೆ. ಅವರಿಗೆ ಮಲಯಾಳಂ ಬಿಟ್ಟರೆ ಬೇರೆ ಯಾವ ಭಾಷೆಯೂ ಗಫ್ ಚುಪ್ ಅಂದರೂ ತಿಳಿಯದವರು.
ಇದೀಗ ರಜೆ ಮೇಲೆ ತೆರಳಿರುವ ಶಿಕ್ಷಕಿ ಕೆಲಸಕ್ಕೆ ರಾಜೀನಾಮೆ ನೀಡಿದರೆ, ಮಲಯಾಳಂ ಭಾಷಿಕ ಶಿಕ್ಷಕಿಯನ್ನೇ ಖಾಯಂಗೊಳಿಸುವುದು ಸಾಮಾನ್ಯ ನಿಯಮ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಅಂಗನವಾಡಿ ಸಮಿತಿಯ ಮೂಲಕ ಶಿಕ್ಷಕಿಯರ ನೇಮಕಾತಿ ನಡೆಯುತ್ತಿತ್ತು. ದ್ವಿಭಾಷೆ ಗೊತ್ತಿದ್ದವರನ್ನೇ ನೇಮಿಸುತ್ತಿದ್ದರು. ಪ್ರಸ್ತುತ ಗ್ರಾ.ಪಂ.ಸದಸ್ಯರಿಗಾಗಲೀ, ಅಂಗನವಾಡಿ ನಿರ್ವಹಣಾ ಸಮಿತಿಗಾಗಲಿ ಗಮನಕ್ಕೆ ತಾರದೆ ಈ ಅಕ್ರಮ ನೇಮಕಾತಿ ಮಾಡಲಾಗಿದೆ. ಶಿಶು ವಿಕಸನ ಕಛೇರಿಯಿಂದ ನೇಮಕಾತಿ ನಡೆದಿರುವುದರಿಂದ ಈ ಎಡವಟ್ಟಿಗೆ ಕಾರಣ ಎನ್ನಲಾಗಿದೆ.
ಬುಡಕ್ಕೇ ಕೊಡಲಿಯೇಟು?
ಸರ್ಕಾರಿ ಕಛೇರಿಗಳಲ್ಲಿ ಕುಳಿತಿರುವ ಮಲಯಾಳಿ ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತೃಭಾμÉಯಲ್ಲಿಯೇ ಕಲಿಯುವುದು ಪ್ರತಿಯೊಂದು ಮಗುವಿನ ಹಕ್ಕು. ಅಂಥದ್ದರಲ್ಲಿ ಅಂಗನವಾಡಿಯಿಂದಲೇ ಮಗುವಿನ ಮೇಲೆ ಮಲಯಾಳ ಹೇರಿಕೆ ಮಾಡಿದರೆ ಕನ್ನಡ ಕಲಿಯಬೇಕಾದ ಮಕ್ಕಳು ಏನು ಮಾಡಬೇಕು ಎಂದು ಅಂಗನವಾಡಿ ವಿದ್ಯಾರ್ಥಿಯ ತಾಯಿಯವರಲ್ಲೊಬ್ಬರಾದ ನಯನ ಸಂಕಷ್ಟದ ಬಗ್ಗೆ ಖೇದ ವ್ಯಕ್ತಪಡಿಸಿ ವಿಜಯವಾಣಿಗೆ ಅವಲತ್ತುಕೊಂಡಿದ್ದಾರೆ.
ಈ ಮೂಲಕ ಪ್ರಾಥಮಿಕ ಹಂತದಿಂದಲೇ ಕನ್ನಡ ಕಲಿಕೆಗೆ ಕೇರಳ ಸರ್ಕಾರ ಕೊಡಲಿಯೇಟು ಹಾಕಲು ನಿರ್ಧರಿಸಿದೆಯೇ ಎಂದು ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.