ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೊವ್ವಲ್ ಬೆಂಚ್‍ಕೋರ್ಟ್ ಸನಿಹದ ನಿವಾಸಿ, ಕಾಸರಗೋಡಿನಲ್ಲಿ ವ್ಯಾಪಾರಿಯಾಗಿರುವ ಜಾಫರ್ ಎಂಬವರ ಪತ್ನಿ ಶೈಮಾ ಯಾನೆ ಅಲಿಮಾ(35)ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶೈಮಾ ಪತಿ ಜಾಫರ್‍ನನ್ನು ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಶೈಮಾ ಮೃತದೇಹ ನ. 15ರಂದು ರಾತ್ರಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜಾಫರ್ ಹಾಗೂ ಶೈಮಾ ದಂಪತಿ 15ವರ್ಷಕ್ಕಿಂತ ಕೆಳಗಿನ ಪ್ರಾಯದ ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಜಾಫರ್ ತಲೆಮರೆಸಿಕೊಂಡಿದ್ದು, ಸಂಶಯಕ್ಕೆ ಕಾರಣವಾಗಿತ್ತು. ಸುಳ್ಯ ಜಯನಗರ ನಿವಾಸಿಯಾಗಿರುವ ಶೈಮಾ ಅವರಿಗೆ ಪತಿ ನಿರಂತರ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಸಂಬಂಧಿಕರು ದೂರಿದ್ದಾರೆ. ಈಕೆ ಬರೆದಿದ್ದ ಪತ್ರವೊಂದು ಪೊಲೀಸರಿಗೆ ಲಭಿಸಿದೆ.