ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್ ಕ್ಷೇತ್ರದ ಲೋಕಸಭೆ ಸದಸ್ಯೆಯಾಗಿ ಪ್ರಮಾಣ ವಚನವನ್ನು ಗುರುವಾರ ಸ್ವೀಕರಿಸಿದರು.
52ರ ಹರೆಯದ ಪ್ರಿಯಾಂಕಾ ಅವರು ಸಕ್ರಿಯ ರಾಜಕೀಯಕ್ಕೆ ಸೇರಿದ ಐದು ವರ್ಷಗಳ ನಂತರ ಚುನಾಯಿತ ಪ್ರತಿನಿಧಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ.
ಪ್ರಿಯಾಂಕಾ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಅವರ ತಾಯಿ, ಪಕ್ಷದ ಸಂಸದೀಯ ಪಕ್ಷದ (ಸಿಪಿಪಿ) ಮುಖ್ಯಸ್ಥೆ ಸೋನಿಯಾ ಗಾಂಧಿ, ಪತಿ ರಾಬರ್ಟ್ ವಾದ್ರಾ, ಮಗ ರೈಹಾನ್ ಮತ್ತು ಮಗಳು ಮಿರಾಯಾ ಅವರು ಪ್ರೇಕ್ಷಕರ ಗ್ಯಾಲರಿಯಿಂದ ವೀಕ್ಷಿಸಿದರು.
ಇದಕ್ಕೂ ಮೊದಲು, ಕಾಂಗ್ರೆಸ್ ಸಂಸದರು ಸಂಸತ್ತಿನ ಆವರಣದಲ್ಲಿರುವ ಸಿಪಿಪಿ ಕಚೇರಿಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಪ್ರಮಾಣವಚನ ಸ್ವೀಕರಿಸಿದ ನಂತರ, ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಲಿಂಗಿಸಿಕೊಂಡು ಸಂಭ್ರಮ ಹಂಚಿಕೊಂಡರು.