HEALTH TIPS

ಕೆನಡಾ: ಖಾಲಿಸ್ತಾನಿ ಬೆಂಬಲಿಗರಿಂದ ಹಿಂದೂ ದೇಗುಲ ಬಳಿ ಘರ್ಷಣೆ

          ಟ್ಟಾವ: ಖಾಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದೊಳಗೆ ಭಾನುವಾರ ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿರುವ ಘಟನೆ ನಡೆದಿದೆ.

          ಈ ಕುರಿತ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ, 'ಕೆನಡಾದ ಪ್ರತಿಯೊಬ್ಬ ಪ್ರಜೆಗೂ ಧರ್ಮವನ್ನು ಮುಕ್ತ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕು ಇದೆ' ಎಂದು ಹೇಳಿದ್ದಾರೆ.

          ಪೀಲ್‌ ಪ್ರದೇಶದ ಪೊಲೀಸರ ಪ್ರಕಾರ, ಬ್ರಾಂಪ್ಟನ್‌ನ ಹಿಂದೂ ಸಭಾ ದೇವಾಲಯದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಖಾಲಿಸ್ತಾನ ಪರ ಬ್ಯಾನರ್‌ಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಇದರಲ್ಲಿ ಭಾಗಿಯಾಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೊಗಳಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತ ವರದಿಯನ್ನು ಕೆನಡಾದ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ಮಾಡಿದೆ.

            ಹಿಂದೂ ಸಭಾ ಮಂದಿರ ದೇಗುಲದ ಆವರಣದಲ್ಲಿ ಜನರು ಕೈ ಕೈ ಮಿಲಾಯಿಸಿ, ಹೊಡೆದಾಡಿಕೊಂಡಿರುವ ದೃಶ್ಯ ವಿಡಿಯೊದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸ್ವೀಕಾರಾರ್ಹವಲ್ಲ- ಕೆನಡಾ ಪ್ರಧಾನಿ

         ಘಟನೆಗೆ ಸಂಬಂಧಿಸಿದಂತೆ 'ಎಕ್ಸ್‌'ನಲ್ಲಿ ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ, 'ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಕೆನಡಾದ ಪ್ರತಿ ಪ್ರಜೆಯೂ ತಮ್ಮ ಧರ್ಮ ಮತ್ತು ನಂಬಿಕೆಯನ್ನು ಮುಕ್ತ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಈ ಘಟನೆಗೆ ತಕ್ಷಣವೇ ಪ್ರತಿಕ್ರಿಯಿಸಿ ಸಮುದಾಯವನ್ನು ರಕ್ಷಿಸಿದ ಪೀಲ್‌ ಪ್ರಾದೇಶಿಕ ಪೊಲೀಸರಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

             'ಶಾಂತಿಯುತ ಮತ್ತು ಸುರಕ್ಷಿತ ರೀತಿಯಲ್ಲಿ ಪ್ರತಿಭಟಿಸುವ ಹಕ್ಕನ್ನು ನಾವು ಗೌರವಿಸುತ್ತೇವೆ. ಆದರೆ ಹಿಂಸಾಚಾರ ಮತ್ತು ಅಪರಾಧ ಕೃತ್ಯಗಳನ್ನು ಸಹಿಸುವುದಿಲ್ಲ' ಎಂದು ಪೀಲ್‌ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ನಿಶಾನ್‌ ದುರೈಯಪ್ಪ 'ಎಕ್ಸ್‌'ನಲ್ಲಿ ಹೇಳಿದ್ದಾರೆ.

             ದಾಳಿಯಲ್ಲಿ ಭಾಗಿಯಾದವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೀಲ್‌ ಪೊಲೀಸರು ಸಿಬಿಸಿ ಟೊರೊಂಟೊ ನ್ಯೂಸ್‌ಗೆ ತಿಳಿಸಿದ್ದಾರೆ.

ಭಾರತದ ಹೈಕಮಿಷನ್‌ ಖಂಡನೆ:

            ಹಿಂದೂ ಸಭಾ ಮಂದಿರದ ಮೇಲೆ 'ಭಾರತ ವಿರೋಧಿ' ಜನರಿಂದ ನಡೆದ ದಾಳಿಯನ್ನು ಒಟ್ಟಾವದಲ್ಲಿನ ಭಾರತದ ಹೈಕಮಿಷನ್‌ ಬಲವಾಗಿ ಖಂಡಿಸಿದೆ. ಹಿಂದೂ ಸಭಾ ಮಂದಿರ ಮತ್ತು ಭಾರತದ ದೂತವಾಸ ಕಚೇರಿ ಜಂಟಿಯಾಗಿ ಆಯೋಜಿಸಿದ್ದ ಕಾನ್ಸುಲರ್‌ ಶಿಬಿರಕ್ಕೆ ಈ ಘಟನೆಯಿಂದ ಅಡ್ಡಿಯಾಯಿತು ಎಂದು ಅದು 'ಎಕ್ಸ್‌'ನಲ್ಲಿ ತಿಳಿಸಿದೆ.

            ಈ ದಾಳಿಯನ್ನು ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆಲಿವ್ರೆ ಮತ್ತು ಬ್ರಾಂಪ್ಟನ್‌ ಮೇಯರ್‌ ಪ್ಯಾಟ್ರಿಕ್‌ ಬ್ರೌನ್‌ ತೀವ್ರವಾಗಿ ಖಂಡಿಸಿದ್ದಾರೆ.

            2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ವರ್ಷದ ಹಿಂದೆ ಪ್ರತಿಪಾದಿಸಿದ್ದರು. ಇದರ ಬೆನ್ನಲ್ಲೇ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು.

            ಕೆನಡಾ ನೆಲದಲ್ಲಿ ಸಿಖ್‌ ಪ್ರತ್ಯೇಕತಾವಾದಿಗಳನ್ನು ಹತ್ಯೆಗೈಯುವ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್‌ ಶಾ ಅವರ ಕೈವಾಡವಿದೆ ಎಂದೂ ಕೆನಡಾ ಇತ್ತೀಚೆಗೆ ಆರೋಪಿಸಿತ್ತು. ಅದಾಗ್ಯೂ, ಕೆನಡಾದ ಈ ಆರೋಪಗಳನ್ನು ನಿರಾಕರಿಸಿರುವ ಭಾರತೀಯ ಅಧಿಕಾರಿಗಳು ಅವನ್ನು ಅಸಂಬದ್ಧ ಮತ್ತು ನಿರಾಧಾರ ಎಂದು ಹೇಳಿದ್ದಾರೆ.

ಉದ್ದೇಶಪೂರ್ವಕ ನಿರ್ಲಕ್ಷ್ಯ: ವಿಎಚ್‌ಪಿ ಆರೋಪ

             ನವದೆಹಲಿ: ಕೆನಡಾದ ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) 'ಭದ್ರತೆ ಒದಗಿಸುವಂತೆ ಭಾರತೀಯ ದೂತವಾಸ ಕಚೇರಿ ಮಾಡಿದ್ದ ಮನವಿಯನ್ನು ಕೆನಡಾ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದೆ' ಎಂದು ಆರೋಪಿಸಿದೆ.

                  'ದೇಗುಲದ ಆವರಣದಲ್ಲಿ ಭಾರತೀಯ ಕಾನ್ಸುಲರ್‌ ಶಿಬಿರವನ್ನು ಆಯೋಜಿಸಲಾಗಿತ್ತು. ಮೂರು ದಿನಗಳ ಮುನ್ನವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿಯೂ ರವಾನೆಯಾಗಿತ್ತು. ಭದ್ರತೆ ಅಗತ್ಯವಿದೆ ಎಂದು ಮಾಡಿದ್ದ ಮನವಿಯನ್ನು ಕೆನಡಾ ನಿರ್ಲಕ್ಷ್ಯ ಮಾಡಿತ್ತು. ಅದರಿಂದಾಗಿ ಈ ಘಟನೆ ನಡೆದಿದೆ' ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್‌ ಕುಮಾರ್‌ ದೂರಿದ್ದಾರೆ.

'ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಟೊರೊಂಟೊ ಬ್ರಿಟಿಷ್‌ ಕೊಲಂಬಿಯಾದಲ್ಲಿನ ಹಿಂದೂ ದೇವಾಲಯಗಳ ಮೇಲೆ ಈ ಹಿಂದೆ ದಾಳಿಗಳು ನಡೆದಿವೆ. ಎಡ್ಮಂಟನ್‌ನಲ್ಲಿರುವ ಬಿಎಪಿಎಸ್‌ ದೇವಾಲಯದ ಮೇಲೂ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries