ಕಾಸರಗೋಡು: ಮದರಸಾ ಶಿಕ್ಷಣ ಸಾಮಾಜಿಕ ಬದ್ಧತೆ ಪ್ರತಿಪಾದಿಸುವುದರ ಜತೆಗೆ, ನಾನು ಎಂಬ ಸ್ವಾರ್ಥ ಮನೋಭಾವವನ್ನು ತೊಡೆದುಹಾಕುವಲ್ಲಿ ಸಹಕಾರಿಯಾಗಿರುವುದಾಗಿ ಶಾಸಕ ಎನ್. ಎ. ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ಕಾಸರಗೋಡು ದೇಳಿಯ ಜಾಮಿಯಾ ಸ-ಅದಿಯಾ ಶಿಕ್ಷಣ ಸಂಸ್ಥೆಗಳ 55ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದ ಪೂರ್ವಭಾವಿಯಾಗಿ ಕಾಸರಗೋಡು ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಉದ್ಘಾಟಿಸಿ ಮಾತನಾಡಿದರು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದಲಿ ಸಖಾಫಿ ತೃಕರಿಪುರ ಮತ್ತು ಸುಲೈಮಾನ್ ಕೈವಲ್ಲೂರು ವಿಷಯ ಮಂಡಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಕೊಲ್ಲಂಪಾಡಿ ಅಬ್ದುಲ್ ಖಾದರ್ ಸಅದಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರದೀಪ್ ನಾರಾಯಣನ್, ಸೈಯದ್ ಜಾಫರ್ ಸಾದಿಕ್ ತಂಗಳ್, ಅಬ್ದುಸಲಾಂ ದೇಳಿ, ಖಲೀಲ್‍ಮಾಕೋಟ್ ಉಪಸ್ಥಿತರಿದ್ದರು. ಸಿ.ಎಲ್.ಹಮೀದ್ ಸ್ವಾಗತಿಸಿದರು. ನ್ಯಾಷನಲ್ ಅಬ್ದುಲ್ಲಾ ವಂದಿಸಿದರು.
22ರಿಂದ ಕಾರ್ಯಕ್ರಮ:
ಕಾಸರಗೋಡು ದೇಳಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಜಾಮಿಯಾ ಸಾದಿಯಾದ 55 ನೇ ವಾರ್ಷಿಕ ಪದವಿ ಪ್ರದಾನ ಸಮ್ಮೇಳನವು ದೇಳಿಯ ಸಾದಾಬಾದ್‍ನಲ್ಲಿ ನವೆಂಬರ್ 22ರಿಂದ 24ರ ವರೆಗೆ ನಡೆಯಲಿದೆ. ಸಮ್ಮೇಳನದಲ್ಲಿ 445 ವಿದ್ಯಾರ್ಥಿಗಳಿಗೆ ಸಅದಿ ಪದವಿ, 44 ವಿದ್ಯಾರ್ಥಿಗಳಿಗೆ ಅಫ್ಜಲ್ ಸಅದಿ ಪದವಿ ಹಾಗೂ ಕುರಾನ್ ಕಂಠಪಾಠ ಮಾಡಿದ 28 ವಿದ್ಯಾರ್ಥಿಗಳಿಗೆ ಹಫ್ಲ್ ಪದವಿ ಪ್ರದಾನ ಮಾಡಲಾಗುವುದು. ಸಮ್ಮೇಳನ ಪೂರ್ವಭಾವಿಯಾಗಿ ನ. 20 ರಂದು ತಳಂಗರೆ ಮಾಲಿಕ್‍ದೀನಾರ್ ಮಸೀದಿ ವಠಾರದಿಂದ ದೇಳಿ ವರೆಗೆ ಧ್ವಜ ಮೆರವಣಿಗೆ ನಡೆಯುವುದು.
21 ರಂದು ಬೆಳಿಗ್ಗೆ 10ಕ್ಕೆ ಅನಿವಾಸಿ ಭಾರತೀಯ ಕುಟುಂಬ ಸಂಗಮವನ್ನು ಸೈಯದ್ ಕೆ.ಎಸ್.ಅಟ್ಟಕೋಯ ತಙಳ್ ಕುಂಬೋಳ್ ಉದ್ಘಾಟಿಸುವರು. 22ರಂದು ನಡೆಯುವ ಸಮಾರಂಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
23ರಂದು ಸಂಜೆ 6.30ಕ್ಕೆ ವಲ್ರ್ಡ್ ಆಫ್ ನೂರುಲ್ ಉಲಮಾ ಅಧಿವೇಶನ ನಡೆಯುವುದು. 24ರಂದು ಬೆಳಗ್ಗೆ 10ಕ್ಕೆ ಸಅದಿ ಪಂಡಿತ ಸಮ್ಮೇಳನ, ಸಂಜೆ 5ಕ್ಕೆ ಪದವಿಪ್ರದಾನ ಸಮಾರಂಭದ ಸಮಾರೋಪ ನಡೆಯುವುದು. ಅಧ್ಯಕ್ಷ ಸೈಯದ್ ಕೆ.ಎಸ್.ಅಟ್ಟಕೋಯ ತಂಗಳ ಕುಂಬೋಳ್ ಅಧ್ಯಕ್ಷತೆಯಲ್ಲಿ ಅರಬ್ ಲೀಗ್ ರಾಯಭಾರಿ ಡಾ. ಮಾಸಿನ್ ನೈಫ್ ಅಲ್ ಮಸೂದಿ ಸಮಾರಂಭ ಉದ್ಘಾಟಿಸುವರು. ಸಮಸ್ತ ಅಧ್ಯಕ್ಷ ರಯೀಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಪದವಿ ಪ್ರದಾನ ನಡೆಸುವರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ.