ಮಂಜೇಶ್ವರ :ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿನಲ್ಲಿ ನೂತನ ಸೌಲಭ್ಯವಾದ ಚಿನ್ನಾಭರಣ ಸಾಲ ಉದ್ಘಾಟನೆ ಜರಗಿತು. ಉಪ್ಪಳ ನಯಾಬಜಾರಿನಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮವನ್ನು ಕೇರಳ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ನ್ಯಾಯವಾದಿ ಶಾಜಿ ಮೋಹನ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡುತ್ತಾ ಗ್ರಾಮೀಣ ಪ್ರದೇಶಕ್ಕನುಗುಣವಾದ ಸೇವಾ ಸೌಲಭ್ಯಗಳನ್ನು ನೀಡುವ ಜತೆಗೆ ಈ ಪ್ರದೇಶದ ಜನತೆಯ ಅಭಿವೃದ್ಧಿ ಜತೆಗೆ ಬ್ಯಾಂಕಿನ ಅಭಿವೃದ್ಧಿ ಚಟುವಟಿಕೆಗಳು ನಡೆದಿರುವುದು ಸಾಧನೆಯ ಸಂಕೇತ. ಬ್ಯಾಂಕಿನ ಹೊಸ ಕಟ್ಟಡ ನಿರ್ಮಾಣವಾಗಿ ಇದೀಗ ಕೇವಲ ಎಂಟು ತಿಂಗಳೊಳಗೆ ಚಿನ್ನಾಭರಣ ಸಾಲ ಸೌಲಭ್ಯಕ್ಕೂ ಬ್ಯಾಂಕ್ ಮುಂದಾಗಿರುವುದು ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ಜನೋಪಯೋಗಿಯಾಗಿ ಬಳಸಿಕೊಂಡಂತಾಗಿದೆ. ಈ ಪ್ರಗತಿಯಲ್ಲಿ ಗ್ರಾಹಕರು ಮತ್ತು ಬ್ಯಾಂಕ್ ಸಮಾನ ಸಹಭಾಗಿಗಳು ಎಂದರು.
ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು. ಪಿಸಿಎಅರ್ ಡಿ ಬ್ಯಾಂಕಿನ ರಾಜ್ಯ ಸಮಿತಿ ಉಪಾಧ್ಯಕ್ಷ ನೀಲಕಂಠನ್, ಡೆಪ್ಯುಟಿ ರಿಜಿಸ್ಟ್ರಾರ್ ಚಂದ್ರನ್ ವಿ, ವಲಯ ಪ್ರಬಂಧಕ ರವಿ ಪ್ರಸಾದ್ ಟಿ, ಕೆಎಸ್ ಸಿಎ ಆರ್ ಡಿ ಬಿ ವಯನಾಡ್ ವಲಯ ಪ್ರಬಂಧಕ ಆರ್.ಎಂ.ಜೊನ್ಸನ್,ಸ್ಪೇಶಲ್ ಸೆಲ್ ಆಫೀಸರ್ ಸೋಜನ್ ಜೋಸೆಫ್ ಮೊದಲಾದವರು ಮಾತನಾಡಿದರು. ಮಂಗಲ್ಪಾಡಿ ಗ್ರಾ.ಪಂ.ಸದಸ್ಯ ಬಾಬು ಬಂದ್ಯೋಡು, ನಿರ್ದೇಶಕರುಗಳಾದ ರಾಧಾಕೃಷ್ಣ ನಾಯಕ್ ಶೇಣಿ, ಪ್ರದೀಪ್ ಕುಮಾರ್ ಶೆಟ್ಟಿ, ಹನೀಪ್ ಮೇರ್ಕಳ, ಲಕ್ಷ್ಮಣ ಪ್ರಭು ಕುಂಬಳೆ, ಚಂದ್ರ ಕಾಜೂರು, ಪ್ರಕಾಶ್,ಜೆಸಿಂತಾ ಡಿಸೋಜ, ಪಾತಿಮ್ಮತ್ ಮಾಸಿತ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕ್ ಕಾರ್ಯದರ್ಶಿ ಶರತ್ ಕುಮಾರ್ ಪಿ ವರದಿ ಮಂಡಿಸಿದರು. ನಿರ್ದೇಶಕರಾದ ಶಂಕರ ನಾರಾಯಣ ಭಟ್ ಸ್ವಾಗತಿಸಿ ಶರತ್ ಚಂದ್ರ ಶೆಟ್ಟಿ ವಂದಿಸಿದರು. ಅವಿನಾಶ್ ಸಿ.ಎಚ್.ನಿರೂಪಿಸಿದರು.