ರಾಯ್‌ಬರೇಲಿ: ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ನಾಸಿರ್‌ಬಾದ್ ಪ್ರದೇಶದ ಗ್ರಾಮವೊಂದರ ಮುಖ್ಯಸ್ಥರ ಪ್ರತಿನಿಧಿಗೆ ಬಲವಂತವಾಗಿ ಆತನದೇ ಉಗುಳನ್ನು ಪೊಲೀಸರು ನೆಕ್ಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಧಿಕಾರಿಗಳ ಅನುಮತಿ ಪಡೆಯದೇ ಆಯೋಜಿಸಿದ್ದ 'ನಾಟಕ' ನಡೆಯುತ್ತಿದ್ದಾಗ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಪ್ರತಿನಿಧಿಯನ್ನು ವಶಕ್ಕೆ ಪಡೆದ ಪೊಲೀಸರು ಈ ಕೃತ್ಯವೆಸಗಿದ್ದಾರೆ ಎಂದು ದೂರಲಾಗಿದೆ.
ನಾಸಿರ್‌ಬಾದ್‌ನ ಕಪೂರ್‌ಪುರ ಗ್ರಾಮದ ಮುಖ್ಯಸ್ಥರ ಪ್ರತಿನಿಧಿ ಸುಶೀಲ್ ಶರ್ಮಾ ಅ.30ರಂದು ಅನುಮತಿ ಇಲ್ಲದೇ ನಾಟಕ ಏರ್ಪಡಿಸಿದ್ದರು. ಕಾರ್ಯಕ್ರಮದ ವೇಳೆ ಈತ ಹಾಗೂ ಈತನ ಸಹಚರರು ಮದ್ಯದ ಅಮಲಿನಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಆರೋಪಿಯು ಸ್ಥಳೀಯ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಶರ್ಮಾ ಸೇರಿದಂತೆ ಐವರನ್ನು ವಶಕ್ಕೆ ಪಡೆಲಾಯಿತು ಎಂದು ರಾಯ್‌ಬರೇಲಿಯ ಪೊಲೀಸ್ ಅಧೀಕ್ಷಕ ಯಶವೀರ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ಮಾಡಲಾದ ಆರೋಪ ಸಂಬಂಧ ಪೊಲೀಸ್ ಹೆಚ್ಚುವರಿ ಅಧೀಕ್ಷಕರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಆದರೆ, ಶರ್ಮಾ ಪ್ರಕಾರ ಪೊಲೀಸ್ ತಂಡವು ಗ್ರಾಮಕ್ಕೆ ತಡರಾತ್ರಿ ಆಗಮಿಸಿ ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದೆ. ತನ್ನನ್ನೂ ಸೇರಿ ಐವರನ್ನು ಬಂಧಿಸಿದ ಪೊಲೀಸರು, ಸ್ಥಳೀಯ ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ನನ್ನದೇ ಉಗುಳನ್ನು ನೆಕ್ಕಿಸಿದ್ದಾರೆ ಎಂದು ಶರ್ಮಾ ಆರೋಪಿಸಿದ್ದಾರೆ.
ನಾಸಿರ್‌ಬಾದ್‌ನ ಠಾಣಾಧಿಕಾರಿ ಶಿವಕಾಂತ್ ಪಾಂಡೆ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟರು ಎಂದೂ ಶರ್ಮಾ ಆರೋಪಿಸಿದ್ದಾರೆ. ಘಟನೆ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರೀಯ ಪಂಚಾಯತ್ ರಾಜ್ ಗ್ರಾಮ ಪ್ರಧಾನ ಸಂಘಟನೆಯು ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದೆ.