ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಹೆನ್ಲಿ ಪಾಸ್‌ಪೋರ್ಟ್ ಬಿಡುಗಡೆ ಮಾಡಿದೆ. ಈ ಬಾರಿ ಮತ್ತೊಮ್ಮೆ ಸಿಂಗಾಪುರವೇ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅದರ ನಾಗರಿಕರಿಗೆ 195 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಸಿಂಗಾಪುರ ಪಾಸ್‌ಪೋರ್ಟ್ ನೀಡುತ್ತದೆ.
195 ರಾಷ್ಟ್ರಗಳಿಗೆ ವೀಸಾರಹಿತವಾಗಿ ಪ್ರವೇಶಿಸಬಹುದಾಗಿದ್ದು, ಈ ಸಾಮರ್ಥ್ಯ ಸಿಂಗಾಪುರ ಬಿಟ್ಟರೆ ವಿಶ್ವದ ಬೇರೆ ಯಾವ ದೇಶದ ಪಾಸ್‌ಪೋರ್ಟ್‌ಗೂ ಇಲ್ಲ.
ಎರಡನೇ ಸ್ಥಾನ ಯಾರಿಗೆ?
ಸಿಂಗಾಪುರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಸ್ಪೇನ್ ಎರಡನೇ ಸ್ಥಾನವನ್ನು ಹಂಚಿಕೊಂಡಿವೆ. ಇತ್ತೀಚಿನ ಶ್ರೇಯಾಂಕಗಳ ಪ್ರಕಾರ ತಮ್ಮ ನಾಗರಿಕರಿಗೆ 192 ದೇಶಗಳಿಗೆ ಈ ಎಲ್ಲಾ ದೇಶಗಳು ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತವೆ.
ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?
ಇನ್ನೂ ಮೂರನೇ ಸ್ಥಾನದಲ್ಲಿ ಆಸ್ಟ್ರೀಯಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಐರ್ಲ್ಯಾಂಡ್, ಸ್ವೀಡನ್, ಸೌತ್ ಕೋರಿಯಾ, ನೆದರ್‌ಲ್ಯಾಂಡ್, ಲುಕ್ಸಂಬರ್ಗ್ ಇವೆ. ಈ ಎಲ್ಲಾ ದೇಶಗಳು 191 ದೇಶಗಳಿಗೆ ವೀಸಾ-ಮುಕ್ತ ಪ್ರವೇಶ ನೀಡುತ್ತದೆ.
4 ಮತ್ತು 5ನೇ ಸ್ಥಾನದಲ್ಲಿರುವ ದೇಶಗಳು
ಬೆಲ್ಜಿಯಂ, ನ್ಯೂಜಿಲ್ಯಾಂಡ್, ನಾರ್ವೆ, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಈ ದೇಶಗಳು 190 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಕಲ್ಪಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿವೆ.
ಆಸ್ಟ್ರೇಲಿಯಾ ಮತ್ತು ಪೋರ್ಚುಗಲ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದು, ತನ್ನ ನಾಗರಿಕರಿಗೆ 189 ದೇಶಗಳಿಗೆ ಪ್ರವೇಶವನ್ನು ನೀಡುತ್ತದೆ.
ವಿಶ್ವದ ದೊಡ್ಡಣ್ಣ ಯುನೈಟೆಡ್ ಸ್ಟೇಟ್ಸ್ 8 ನೇ ಸ್ಥಾನದಲ್ಲಿದೆ, ಅದರ ನಾಗರಿಕರಿಗೆ 186 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ.
ಭಾರತಕ್ಕೆ ಎಷ್ಟನೇ ಸ್ಥಾನ?
ಆರ್ಥಿಕತೆಯಲ್ಲಿ ಮೈಲಿಗಲ್ಲು ಸಾಧಿಸುತ್ತಿರುವ ಭಾರತದ ಪಾಸ್ ಪೋರ್ಟ್ 83ನೇ ಸ್ಥಾನದಲ್ಲಿದೆ. ಭಾರತ ತನ್ನ ನಾಗರಿಕರಿಗೆ 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ.
ವಿಶ್ವದ ದುರ್ಬಲ ಪಾಸ್‌ಪೋರ್ಟ್‌ಗಳು
ಕೆಲವು ಪಾಸ್‌ಪೋರ್ಟ್‌ಗಳು ಅನೇಕ ದೇಶಗಳಿಗೆ ಪ್ರವೇಶವನ್ನು ನೀಡಿದರೆ, ಇತರವು ನಿರ್ಬಂಧಿತ ಪ್ರಯಾಣ ಆಯ್ಕೆಗಳನ್ನು ನೀಡುತ್ತವೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2024 ರ ಪ್ರಕಾರ, ಅಫ್ಘಾನಿಸ್ತಾನ, ಸಿರಿಯಾ, ಇರಾಕ್, ಯೆಮೆನ್, ಸೊಮಾಲಿಯಾ ಮತ್ತು ಭಾರತದ ನೆರೆಯ ಪಾಕಿಸ್ತಾನವು ವಿಶ್ವದ ಅತ್ಯಂತ ಕಡಿಮೆ ಶಕ್ತಿಶಾಲಿ ಸೂಚ್ಯಂಕಗಳನ್ನು ಹೊಂದಿವೆ.
ಕಡಿಮೆ ಶಕ್ತಿಯುತ ಪಾಸ್‌ಪೋರ್ಟ್‌ಗಳು ಕನಿಷ್ಠ ಪ್ರಯಾಣ ಸ್ವಾತಂತ್ರ್ಯವನ್ನು ಆ ದೇಶದ ನಾಗರೀಕರಿಗೆ ನೀಡುತ್ತವೆ, ಹೆಚ್ಚಿನ ಸ್ಥಳಗಳಿಗೆ ಪ್ರಯಾಣಿಸಲು ಇವರು ವೀಸಾವನ್ನು ಪಡೆದುಕೊಳ್ಳುವ ಅಗತ್ಯವಿರುತ್ತದೆ.
ಏಷ್ಯಾ ದೇಶಗಳ ಪವರ್
ಏಷ್ಯಾದ ದೇಶಗಳು ಹಲವಾರು ವರ್ಷಗಳಿಂದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವನ್ನು ಸತತವಾಗಿ ಮುನ್ನಡೆಸುತ್ತಿವೆ. ಜಪಾನ್, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಳ್ಳುತ್ತಿವೆ.
ತಮ್ಮ ನಾಗರಿಕರಿಗೆ ಹಲವಾರು ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತವೆ. ಇದು ಈ ರಾಷ್ಟ್ರಗಳು ಜಾಗತಿಕವಾಗಿ ನಿರ್ಮಿಸಿರುವ ಮತ್ತು ಉಳಿಸಿಕೊಂಡಿರುವ ಬಲವಾದ ರಾಜತಾಂತ್ರಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.
ಪಾಸ್‌ಪೋರ್ಟ್‌ಗಳಿಗೆ ಶ್ರೇಯಾಂಕ ಹೇಗೆ ನೀಡಲಾಗುತ್ತದೆ?
ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿನ ಪಾಸ್‌ಪೋರ್ಟ್ ಶ್ರೇಯಾಂಕವು ಹಲವಾರು ಅಂಶಗಳನ್ನು ಪರಿಗಣಿಸುವ ಸಮಗ್ರ ವಿಧಾನವನ್ನು ಆಧರಿಸಿದೆ.
ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಪ್ರವೇಶಿಸಬಹುದಾದ ದೇಶಗಳ ಸಂಖ್ಯೆ, ದೇಶದ ರಾಜತಾಂತ್ರಿಕ ಸಂಬಂಧಗಳು ಮತ್ತು ಅದರ ಅಂತರರಾಷ್ಟ್ರೀಯ ಒಪ್ಪಂದ ಸೇರಿ ಹಲವು ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.