ನವದೆಹಲಿ: ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವ ಕೃಷಿಕರಿಗೆ ವಿಧಿಸುತ್ತಿರುವ ದಂಡದ ಮೊತ್ತವನ್ನು ದ್ವಿಗುಣಗೊಳಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.
ದೆಹಲಿಯ ಎನ್‌ಸಿಆರ್ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ, ನಿಯಮಗಳಿಗೆ ಸರ್ಕಾರ ತಿದ್ದುಪಡಿ ತಂದಿದೆ.
ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವ ಕೃಷಿಕರಿಂದ ಪರಿಸರ ಪರಿಹಾರ ರೂಪದಲ್ಲಿ ದಂಡ ಸಂಗ್ರಹಿಸಲು ಈ ನಿಯಮಗಳು ಅನುವು ಮಾಡಿಕೊಡಲಿದೆ ಎಂದು 'ಎಎನ್‌ಐ' ವರದಿ ಮಾಡಿದೆ.
ಹೊಸ ನಿಯಮಗಳ ಪ್ರಕಾರ, ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ₹ 5,000, ಎರಡು ಎಕರೆಗಿಂತ ಹೆಚ್ಚು ಮತ್ತು ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ₹ 10,000 ಹಾಗೂ ಹತ್ತಕ್ಕಿಂತಲೂ ಅಧಿಕ ಎಕರೆ ಕೃಷಿ ಜಮೀನು ಹೊಂದಿರುವವರು ₹ 30,000 ಪರಿಸರ ಪರಿಹಾರ ಪಾವತಿಸಬೇಕಾಗುತ್ತದೆ.
ಗಾಳಿ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ದೆಹಲಿಯ ಆನಂದ್ ವಿಹಾರ, ಅಶೋಕ ವಿಹಾರ, ಬವಾನ, ಜಹಾಂಗಿರ್‌ಪುರಿ, ಮುಂಡ್ಕಾ, ರೋಹಿಣಿ, ಸೋನಿಯಾ ವಿಹಾ, ವಿವೇಕ್ ವಿಹಾರ, ವಾಝಿಪುರದಲ್ಲಿ ನವೆಂಬರ್ 7ರ ಬೆಳಿಗ್ಗೆ 9ರ ಹೊತ್ತಿಗೆ 367ಕ್ಕೆ ಕುಸಿದಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಎಕ್ಯೂಐ ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ಅತ್ಯಂತ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.