ಬದಿಯಡ್ಕ: ಎಡನೀರು ಮಠದ ಶ್ರೀಸಚ್ಛಿದಾನಂದ ಭಾರತೀ ಸ್ವಾಮೀಜಿ ಅವರ ಕಾರಿಗೆ ಆಕ್ರಮಿಸಿ, ಸಂಚಾರಕ್ಕೆ ತಡೆಯೊಡ್ಡಿದ ಘಟನೆ ಬಗ್ಗೆ ಅಖಿಲ ಭಾರತೀಯ ಸಂತ ಸಮಿತಿ ರಾಷ್ಟ್ರೀಯ ಘಟಕದ ಮುಖ್ಯಸ್ಥರು ಖಂಡನೆ ಸೂಚಿಸಿರುವ ಜತೆಗೆ ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದೆ. ಈ ಮೂಲಕ ಎಡನೀರು ಶ್ರೀಗಳ ವಾಹನ ಅತಿಕ್ರಮಣ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದುಮಾಡತೊಡಗಿದೆ.
ಎಡನೀರು ಶ್ರೀಗಳ ವಾಹನ ಆಕ್ರಮಿಸಿದ ಘಟನೆ ಅಕ್ಷಮ್ಯ ಅಪರಾಧವಾಗಿದ್ದು, ಆರೋಪಿಗಳನ್ನು ಬಂಧಿಸದೆ, ಈ ವಿಷಯದಲ್ಲಿ ಕೇರಳ ಸರ್ಕಾರದ ನಿರ್ಲಕ್ಷ್ಯ ನೀತಿಯನ್ನು ಅಖಿಲಭಾರತ ಸಂತ ಸಮಿತಿ ಖಂಡಿಸಿತ್ತು. ಅಲ್ಲದೆ, ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕೇರಳ ಮುಖ್ಯಮಂತ್ರಿಯನ್ನು ಮನವಿ ಮೂಲಕ ಸಂತಸಮಿತಿ ಒತ್ತಾಯಿಸಿದೆ. ಈಗಾಗಲೇ ಎಡನೀರು ಮಠದಲ್ಲಿ ವಿಶೇಷ ಬೈಠಕ್ ನಡೆಸಿ, ಕಾಸರಗೋಡು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿತ್ತು. ಆರೋಪಿಗಳ ಬಂಧನಕ್ಕಾಗಿ 40ದಿವಸಗಳ ಕಾಲಾವಧಿ ನೀಡಲಾಗಿದ್ದು, ಆರೋಪಿಗಳ ಬಂಧನ ಸಾಧ್ಯವಗದಿದ್ದಲ್ಲಿ, ಸಂತ ಸಮಿತಿಯ ರಾಷ್ಟ್ರೀಯ ಘಟಕದ ಸಲಹೆಯಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂಬುದಾಗಿ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ಓಂ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.