ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬಳಕೆಗಾಗಿ ದರ್ಭೆ ಕೊಯ್ಲು ಮತ್ತು ಸಂಸ್ಕರಣೆ ಎನ್ನುವ ವಿಶಿಷ್ಟ ಕಾರ್ಯಕ್ರಮ ಏತಡ್ಕ ಕೊಚ್ಚಿ ಗೋಪಾಲಕೃಷ್ಣ ಭಟ್ಟರ ನಿವಾಸ ಮತ್ತು ಕೃಷಿಭೂಮಿಯಲ್ಲಿ ಜರುಗಿತು. ಪಳ್ಳತ್ತಡ್ಕ ಹವ್ಯಕ ವಲಯ ಮತ್ತು ದೇವಸ್ಥಾನ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು.
ಕೃಷಿಕ ಕೊಚ್ಚಿ ಗೋಪಾಲಕೃಷ್ಣ ಭಟ್ ಅವರು ದರ್ಭೆ ಹುಲ್ಲನ್ನು ಕೊಯ್ಲು ಮಾಡಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ. ಶ್ಯಾಮ ಭಟ್ ಅವರಿಗೆ ಸಾಂಕೇತಿಕವಾಗಿ ಕ್ಷೇತ್ರದಲ್ಲಿ ನೀಡಿ ಔಪಚಾರಿಕವಾಗಿ ಉದ್ಘಾಟಿಸಿದರು.ದರ್ಭೆ ಕೊಯ್ಲು ಮತ್ತು ಸಂಸ್ಕರಣೆಗೆ ಪಾವಿತ್ರ್ಯತೆಯ ದೃಷ್ಟಿಯಿಂದ ಪಾರಂಪರಿಕವಾದ ವಿಧಿ ವಿಧಾನಗಳಿವೆ. ಧರ್ಭಾಹರಣವೆನ್ನುವ ದಿನದಿಂದ ಇದರ ಕೊಯ್ಲು ಆರಂಭ. ಕೊಯ್ಲಿನ ದಿನವೇ ಒಣಗಿಸುವುದು ಗುಣಮಟ್ಟ ಕಾಯ್ದುಕೊಳ್ಳಲು ಬಹು ಮುಖ್ಯ ಅಂಶವಾಗಿದೆ. ಸುದೀರ್ಘ ಬಾಳ್ವಿಕೆ ಹಾಗೂ ವೈದಿಕ ಬಳಕಗೆ ಆಗ ಸೂಕ್ತವಾಗುತ್ತದೆ ಎಂಬುದಾಗಿ ಯುವ ಕೃಷಿಕ ಶಿವಕುಮಾರ್ ಕೊಚ್ಚಿ ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿಕರ ನಿವಾಸದಲ್ಲಿ ನಡೆದ ವಿಚಾರ ವಿನಿಮಯ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ.ಶ್ಯಾಮ ಭಟ್ ವಹಿಸಿದ್ದರು. ದರ್ಭೆಯ ಕೊಯ್ಲೋತ್ತರದ ಬಳಕೆಯ ಕುರಿತು ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪನೆಯಾಲ ಗೋವಿಂದ ಭಟ್ ಮಾಹಿತಿ ನೀಡಿ ಪ್ರಶ್ನೆಗಳಿಗೆ ಉತ್ತರಿಸಿದರು. ಡಾ.ವೈ.ವಿ.ಕೃಷ್ಣಮೂರ್ತೀ ಸ್ವಾಗತಿಸಿ, ಧಾರ್ಮಿಕ ಸಮಿತಿಯ ಸಂಚಾಲಕ ಗಣರಾಜ ಕಡೇಕಲ್ಲು ವಂದಿಸಿದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು. ವೈದಿಕ, ತಾಂತ್ರಿಕ ಹಾಗೂ ವೈದ್ಯಕೀಯವಾಗಿಯೂ ಅತ್ಯಂತ ಮಹತ್ವದ ಧರ್ಬೆಯ ಕೃಷಿ, ಸಂಸ್ಕರಣೆ ಮತ್ತು ಬಳಕೆಯ ಕುರಿತು ಈ ಶಿವಾರ್ಪಣಂ ಚಟುವಟಿಕೆ ಬೆಳಕು ಬೀರಿತು.