ಬೀಜಿಂಗ್: ಪೂರ್ವ ಲಡಾಖ್‌ನಲ್ಲಿ ಸೇನಾ ಪಡೆಗಳನ್ನು ಹಿಂಪಡೆಯುವ ಸಂಬಂಧ ಭಾರತದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನುಷ್ಠಾನವು ಸದ್ಯ ಸುಗಮವಾಗಿ ಸಾಗಿದೆ ಎಂದು ಚೀನಾ ಸೋಮವಾರ ಹೇಳಿದೆ. ಆದರೆ, ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನ ಎರಡು ಘರ್ಷಣಾ ಸ್ಥಳಗಳಲ್ಲಿ ಸೇನಾ ಗಸ್ತು ಪುನರಾರಂಭದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
'ಚೀನಾ ಮತ್ತು ಭಾರತೀಯ ಪಡೆಗಳು, ಗಡಿ ಪ್ರದೇಶದ ಸಮಸ್ಯೆಗಳಿಗೆ ಸಂಬಂಧಿಸಿ ಉಭಯ ದೇಶಗಳು ಮಾಡಿಕೊಂಡಿರುವ ಒಪ್ಪಂದವನ್ನು ಕಾರ್ಯಗತಗೊಳಿಸುತ್ತಿವೆ. ಅದು ಸದ್ಯಕ್ಕೆ ಸುಗಮವಾಗಿ ನಡೆಯುತ್ತಿದೆ' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆದಾಗ್ಯೂ ಭಾರತೀಯ ಸೇನಾ ಪಡೆಗಳು ಈ ಎರಡು ಪ್ರದೇಶಗಳಲ್ಲಿ ಗಸ್ತು ಪ್ರಾರಂಭಿಸುವ ಬಗ್ಗೆ ಕೇಳಲಾದ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಸೇನಾ ಘರ್ಷಣೆಗೆ ಕಾರಣವಾಗಿದ್ದ ಎರಡನೇ ಸ್ಥಳ, ಪೂರ್ವ ಲಡಾಖ್‌ನ ಡೆಪ್ಸಾಂಗ್‌ನಲ್ಲಿ ಭಾರತೀಯ ಸೇನೆಯು ಗಸ್ತು ಪ್ರಾರಂಭಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ನವದೆಹಲಿಯಲ್ಲಿ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದರು. ಪೂರ್ವ ಲಡಾಖ್‌ನ ಎರಡು ಘರ್ಷಣೆ ಕೇಂದ್ರಗಳಲ್ಲಿ ಭಾರತ ಮತ್ತು ಚೀನಾ ಪಡೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ಒಂದು ದಿನದ ನಂತರ ಶುಕ್ರವಾರ ಡೆಮ್‌ಚೋಕ್‌ನಲ್ಲಿ ಸೇನಾ ಗಸ್ತು ಪ್ರಾರಂಭವಾಯಿತು.
ಕಳೆದ ಹಲವು ವಾರಗಳಿಂದ ನಡೆದ ಮಾತುಕತೆಗಳ ನಂತರ ಭಾರತ ಮತ್ತು ಚೀನಾ ನಡುವೆ ಒಪ್ಪಂದ ಅಂತಿಮಗೊಂಡಿದೆ. ಇದು 2020ರಲ್ಲಿ ಉದ್ಭವಿಸಿದ ಗಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಕ್ಟೋಬರ್ 21ರಂದು ಹೇಳಿಕೆ ನೀಡಿದ್ದರು.
ಪೂರ್ವ ಲಡಾಖ್‌ನ ಎಲ್‌ಎಸಿಯ ಉದ್ದಕ್ಕೂ ಗಸ್ತು ತಿರುಗುವಿಕೆ ಪುನರಾರಂಭಿಸುವ ಮತ್ತು ಸೇನೆ ಹಿಂಪಡೆಯುವ ಕುರಿತು ಒಪ್ಪಂದ ಉಭಯ ದೇಶಗಳ ನಡುವೆ ಏರ್ಪಟ್ಟಿತು. ಇದು ನಾಲ್ಕು ವರ್ಷಗಳ ಸುದೀರ್ಘ ಗಡಿ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಮಹತ್ವದ ಪ್ರಗತಿ ಎನಿಸಿದೆ.
2020ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಸೇನಾ ಘರ್ಷಣೆಯ ನಂತರ ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದು ದಶಕಗಳಲ್ಲಿ, ಉಭಯ ರಾಷ್ಟ್ರಗಳ ನಡುವಿನ ಅತ್ಯಂತ ಗಂಭೀರ ಸೇನಾ ಸಂಘರ್ಷವಾಗಿ ಗುರುತಿಸಲ್ಪಟ್ಟಿತ್ತು.