ಕಾಸರಗೊಡು: ನಗರದ ಪಳ್ಳ ರೈಲ್ವೆ ಅಂಡರ್ ಪ್ಯಾಸೇಜ್ ಮೇಲಿನ ರೈಲ್ವೆ ಹಳಿಯಲ್ಲಿ ಬುಡಮೇಲು ಕೃತ್ಯಕ್ಕೆ ಯತ್ನಿಸಲಾಗಿದೆ. ರೈಲ್ವೆ ಹಳಿಯಲ್ಲಿ ಬಾಟಲಿ ಮತ್ತು ನಾಣ್ಯಗಳನ್ನಿರಿಸಿ ರೈಲು ಹಳಿ ತಪ್ಪಿಸುವ ಯತ್ನ ನಡೆಸಲಾಗಿದೆ. ಪ್ಲಾಸ್ಟಿಕ್ ಬಾಟಲಿ ಮತ್ತು ನಾಣ್ಯಗಳನ್ನು ಸೆಲ್ಲೋಟ್ಯಾಪ್ ಮೂಲಕ ಸುತ್ತಿ, ಹಳಿಯಲ್ಲಿರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರ ಮೇಲಿಂದ ರೈಲು ಸಂಚರಿಸಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ. ಸ್ಥಳಕ್ಕೆ ಕಾಸರಗೋಡು ರೈಲ್ವೆ ಪೊಲೀಸ್, ಪಾಲಕ್ಕಾಡ್ ವಿಭಾಗ ಡಿವೈಎಸ್‍ಪಿ ಸಂತೋಷ್ ಕುಮಾರ್, ಸಿ.ಐ ಸುಧೀರ್‍ಮನೋಹರ್, ಕಾಸರಗೋಡು ರೈಲ್ವೆ ಎಸ್.ಐ ಎಂ.ವಿ ಪ್ರಕಾಶನ್ ಮೊದಲಾದವರು ಭೇಟಿ ನೀಡಿ ತಪಾಸಣೆ ನಡೆಸಿದರು. ಸ್ಟೇಶನ್ ಮಾಸ್ಟರ್ ಅವರ ದೂರಿನ ಮೇರೆಗೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಆಗಮಿಸಿ ತಪಾಸಣೆ ನಡೆಸಿದೆ. ಇನ್ನೊಂದೆಡೆ ಆರ್‍ಪಿಎಫ್ ಕೂಡಾ ತನಿಖೆ ನಡೆಸುತ್ತಿದೆ. ಟ್ರ್ಯಾಕಿಗೆ ತೆಂಗಿನ ಎಣ್ಣೆಯನ್ನೂ ವ್ಯಾಪಕವಾಗಿ ಸುರಿಯಲಾಗಿದ್ದು, ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿರುವುದು ವ್ಯಕ್ತವಾಗುತ್ತಿದೆ. ಆಸುಪಾಸಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪೊಲೀಸರು ಸಂಗ್ರಹಿಸಿ ತಪಾಸಣೆ ನಡೆಸುತ್ತಿದ್ದಾರೆ.
ಪಳ್ಳ ಪ್ರದೇಶದಲ್ಲಿ ಈ ಹಿಂದೆಯೂ ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ರೈಲ್ವೆ ಹಳಿಯಲ್ಲಿ ಕಲ್ಲು, ಕುಪ್ಪಿ, ನಾಣ್ಯ ಇರಿಸುವುದು, ತೆಂಗಿನೆಣ್ಣೆ ಸುರಿಯುವುದು ಮುಂತಾದ ಕೃತ್ಯಗಳು ಕಳೆದ ಹಲವು ವರ್ಷಗಳಿಂದ ನಡೆದುಬರುತ್ತಿದ್ದರೂ, ಪೊಲೀಸರು ಇದನ್ನು ಗಂಭೀರವಗಿ ಪರಿಗಣಿಸದಿರುವುದರಿಂದ ಇಂತಹ ಕೃತ್ಯಗಳು ಮರುಕಳಿಸಲು ಕಾರಣವಾಗುತ್ತಿದೆ.
: ರೈಲ್ವೆಹಳಿಯಲ್ಲಿ ಕುಪ್ಪಿ, ನಾಣ್ಯ ಇರಿಸಿ ವಿಧ್ವಂಸಕ ಕೃತ್ಯಕ್ಕೆ ಯೆತ್ನಿಸಿದ ಪ್ರದೇಶದಲ್ಲಿ ಶ್ವನದಳದ ಮೂಲಕ ಪೊಲೀಸರು ತನಿಖೆ ನಡೆಸಿದರು.