ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಸೇರಿ ಎಲ್ಲ ಆರೋಪಿಗಳನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಇಂಟರ್‌ಪೋಲ್‌ನ ಸಹಾಯ ಕೋರುವುದಾಗಿ ಇಲ್ಲಿನ ಮಧ್ಯಂತರ ಸರ್ಕಾರ ಭಾನುವಾರ ಹೇಳಿದೆ.
ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ವಿರುದ್ಧ ಕಳೆದ ಆಗಸ್ಟ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಆಗಸ್ಟ್ 5ರಂದು ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.
'ಪ್ರತಿಭಟನೆಯ ಸಮಯದಲ್ಲಿ ಕನಿಷ್ಠ 753 ಜನ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಕ್ರಮವನ್ನು ದೇಶದ ಜನರ ಮೇಲೆ ನಡೆಸಿದ ನರಮೇಧ ಎಂದು ಮಧ್ಯಂತರ ಸರ್ಕಾರ ಹೇಳಿತ್ತು..
60ಕ್ಕೂ ಹೆಚ್ಚು ದೂರು ದಾಖಲು:
ಪ್ರತಿಭಟನಕಾರರ ಮೇಲೆ ದಾಳಿ ನಡೆಸುವಂತೆ ಹಸೀನಾ ಅವರು ಆದೇಶ ಹೊರಡಿಸಿದ್ದರು ಎನ್ನುವ ಆರೋಪವೂ ಸೇರಿ ಹಸೀನಾ ಮತ್ತು ಅವರ ಪಕ್ಷದ ನಾಯಕರ ವಿರುದ್ಧ ಬಾಂಗ್ಲಾದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ)ಯಲ್ಲಿ 60ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಶೀಘ್ರದಲ್ಲೇ ರೆಡ್ ಕಾರ್ನರ್ ನೋಟಿಸ್:
'ಇಂಟರ್‌ಪೋಲ್ ಮೂಲಕ ಶೀಘ್ರದಲ್ಲೇ ರೆಡ್ ಕಾರ್ನರ್ ನೋಟಿಸ್ ನೀಡಲಾಗುವುದು. ಈ ಪಲಾಯನವಾದಿ ಫ್ಯಾಸಿಸ್ಟ್‌ಗಳು ಜಗತ್ತಿನ ಯಾವ ಮೂಲೆಯಲ್ಲಿ ಅಡಗಿಕೊಂಡಿದ್ದರೂ, ಅವರನ್ನು ಮರಳಿ ಕರೆತಂದು ನ್ಯಾಯಾಲಯದಲ್ಲಿ ಹೊಣೆಗಾರರನ್ನಾಗಿ ಮಾಡಲಾಗುವುದು' ಎಂದು ಕಾನೂನು ವ್ಯವಹಾರಗಳ ಸಲಹೆಗಾರ ಆಸಿಫ್ ನಜ್ರುಲ್ ತಿಳಿಸಿದ್ದಾರೆ.
ಹಸೀನಾ ಮತ್ತು ಅವಾಮಿ ಲೀಗ್ ನಾಯಕರನ್ನು ಐಸಿಟಿ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಬಾಂಗ್ಲಾ ಮಧ್ಯಂತರ ಸರ್ಕಾರ ಈ ಹಿಂದೆ ಹೇಳಿತ್ತು.
ಆದಾಗ್ಯೂ, ಕಳೆದ ತಿಂಗಳು ಯುಕೆ ಮೂಲದ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಯೂನಸ್ ಅವರು, ಹಸೀನಾರನ್ನು ಭಾರತದಿಂದ ಹಸ್ತಾಂತರಿಸುವ ಬಗ್ಗೆ ತಮ್ಮ ಸರ್ಕಾರ ತಕ್ಷಣವೇ ಪ್ರಯತ್ನಿಸುವುದಿಲ್ಲ ಎಂದೂ ಹೇಳಿದ್ದರು.
ಏನಿದು ಇಂಟರ್‌ಪೋಲ್:
ಇಂಟರ್‌ಪೋಲ್ ಎಂಬುದು 'ಇಂಟರ್‌ನ್ಯಾಷನಲ್ ಪೊಲೀಸ್ ಆರ್ಗನೈಸೇಷನ್' ಎಂಬುದರ ಸಂಕ್ಷಿಪ್ತ ರೂಪ. ಹೆಸರೇ ಹೇಳುವಂತೆ ಇದು ಅಂತರರಾಷ್ಟ್ರೀಯ ಪೊಲೀಸ್ ಸಂಘಟನೆ. ವಿಶ್ವದ 196 ದೇಶಗಳ ಸದಸ್ಯತ್ವ ಹೊಂದಿರುವ ಈ ಸಂಘಟನೆಯು ಅಪರಾಧಿಗಳ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ದೇಶ-ದೇಶಗಳ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಒಂದು ಸಂಸ್ಥೆಯಾಗಿದೆ.
ಅನಗತ್ಯ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದಲೇ ಇಂಟರ್‌ಪೋಲ್ ಅಸ್ತಿತ್ವಕ್ಕೆ ಬಂದಿದ್ದು, ಅಪರಾಧಿ-ಆರೋಪಿಗಳಿಗೆ ಸಂಬಂಧಿಸಿದಂತೆ ಎರಡು ಅಥವಾ ಹಲವು ದೇಶಗಳ ನಡುವೆ ಮಧ್ಯಸ್ಥ ಸಂಸ್ಥೆಯಾಗಿ ಇಂಟರ್‌ಪೋಲ್ ಕಾರ್ಯನಿರ್ವಹಿಸುತ್ತದೆ.