ಢಾಕಾ: ಭಾರತದ ಉದ್ಯಮಿ ಗೌತಮ್ ಅದಾನಿ ಸಮೂಹ ಸೇರಿದಂತೆ ವಿವಿಧ ವ್ಯಾಪಾರ ಸಂಸ್ಥೆಗಳ ಜತೆಗೆ ಮಾಡಿಕೊಂಡಿರುವ ವಿದ್ಯುತ್ ಸಂಬಂಧಿತ ಒಪ್ಪಂದಗಳ ಪರಿಶೀಲನೆಗೆ ಬಾಂಗ್ಲಾದೇಶ ಸರ್ಕಾರ ರಚಿಸಿರುವ ಪರಿಶೀಲನಾ ಸಮಿತಿಯು, ತನಿಖಾ ಏಜೆನ್ಸಿಯ ನೆರವು ಪಡೆಯಲು ಶಿಫಾರಸು ಮಾಡಿದೆ.
ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ 2009- 2024ರ ಅವಧಿಯಲ್ಲಿ, ವಿದ್ಯುತ್ ಉತ್ಪಾದನೆ ಕುರಿತು ನಡೆದಿರುವ ಒಪ್ಪಂದಗಳನ್ನು ಪರಿಶೀಲಿಸಲು ಕಾನೂನು ಮತ್ತು ತನಿಖಾ ಏಜೆನ್ಸಿಯನ್ನು ನೇಮಿಸುವಂತೆ ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲಗಳ ಸಚಿವಾಲಯದ ರಾಷ್ಟ್ರೀಯ ಪರಿಶೀಲನಾ ಸಮಿತಿ ತಿಳಿಸಿದೆ.
ಅದಾನಿ ಪವರ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಅದಾನಿ (ಗೊಡ್ಡ) ಬಿಐಎಫ್‌ಪಿಸಿಎಲ್‌ನ 1234.4 ಮೆಗಾವಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಸ್ಥಾವರ, ಚೀನಾ ಕಂಪನಿಯ 1320 ಮೆಗಾವಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಸ್ಥಾವರ ಸೇರಿದಂತೆ ಏಳು ಪ್ರಮುಖ ಇಂಧನ ಮತ್ತು ವಿದ್ಯುತ್ ಯೋಜನೆಗಳನ್ನು ಸಮಿತಿಯು ಪರಿಶೀಲಿಸುತ್ತಿದೆ. ಉಳಿದ ಐದು ಯೋಜನೆಗಳು ಬಾಂಗ್ಲಾದೇಶದ ವ್ಯಾಪಾರಿ ಗುಂಪುಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.
ಬಾಂಗ್ಲಾದೇಶ ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದ ಅದಾನಿ ಗ್ರೂಪ್, ವಿದ್ಯುತ್ ಸರಬರಾಜು ಕುರಿತ 800 ಮಿಲಿಯನ್ ಡಾಲರ್ ಬಿಲ್ ಅನ್ನು ಬಾಂಗ್ಲಾದೇಶ ಬಾಕಿ ಇರಿಸಿಕೊಂಡಿರುವ ಕುರಿತು ಉಲ್ಲೇಖಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಬಾಂಗ್ಲಾದೇಶ ವಿದ್ಯುತ್ ಉತ್ಪಾದನಾ ಮಂಡಳಿಯು, ಡಾಲರ್ ಬಿಕ್ಕಟ್ಟಿನ ನಡುವೆಯೂ ಈಗಾಗಲೇ 150 ಮಿಲಿಯನ್ ಡಾಲರ್ ಅನ್ನು ಪಾವತಿಸಲಾಗಿದ್ದು, ಉಳಿದ ಮೊತ್ತವನ್ನು ಪಾವತಿಸಲಾಗುವುದು ಎಂದು ತಿಳಿಸಿದೆ.
ಭಾರತದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳ ಗುತ್ತಿಗೆಯನ್ನು ಸುಲಭವಾಗಿ ಪಡೆಯಲು ಅದಾನಿ ಅವರು ಅಧಿಕಾರಿಗಳಿಗೆ 25 ಕೋಟಿ ಡಾಲರ್‌ಗಳಷ್ಟು (ಅಂದಾಜು ₹2,100 ಕೋಟಿ) ಲಂಚ ನೀಡಿದ್ದಾರೆ ಇಲ್ಲವೆ ನೀಡಲು ಮುಂದಾಗಿದ್ದಾರೆ ಎಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಅದಾನಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅಲ್ಲದೆ ಬಂಧನಕ್ಕೆ ಕೋರ್ಟ್ ವಾರಂಟ್ ಸಹ ಹೊರಡಿಸಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಬಾಂಗ್ಲಾದೇಶ ಅದಾನಿ ಗ್ರೂಪ್ ಜತೆಗಿನ ಒಪ್ಪಂದಗಳ ಪರಿಶೀಲನೆಗೆ ಮುಂದಾಗಿದೆ.