ವಾಷಿಂಗ್ಟನ್: ಜಗತ್ತಿನ ಅತಿದೊಡ್ಡ ಆರ್ಥಿಕತೆ ಮತ್ತು ಪ್ರಬಲ ಮಿಲಿಟರಿ ಶಕ್ತಿ ಎನಿಸಿರುವ ಅಮೆರಿಕದ ಮುಂದಿನ ಅಧ್ಯಕ್ಷರ ಆಯ್ಕೆಗೆ ಮಂಗಳವಾರ ನಡೆದ ಮತದಾನದಲ್ಲಿ ಕೋಟ್ಯಂತರ ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಅಮೆರಿಕದ ಮತದಾರರು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಅವಕಾಶ ನೀಡುವರೇ ಅಥವಾ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಗೆಲ್ಲಿಸುವರೇ ಎಂಬ ಪ್ರಶ್ನೆಗೆ ಮುಂದಿನ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.
ಅಮೆರಿಕದಾದ್ಯಂತ ಬೆಳಿಗ್ಗೆ 6ಕ್ಕೆ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಕೆಲವು ಮತಗಟ್ಟೆಗಳ ಎದುರು ಬೆಳಿಗ್ಗೆಯಿಂದಲೇ ಮತದಾರರ ಉದ್ದನೆಯ ಸಾಲುಗಳು ಕಂಡುಬಂದವು. ಉತ್ತರ ಕೆರೊಲಿನಾದ ಬ್ಲ್ಯಾಕ್ ಮೌಂಟೇನ್ ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಟೆಂಟ್‌ಗಳನ್ನು ಹಾಕಿ ತಾತ್ಕಾಲಿಕ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಪೆನ್ಸಿಲ್ವೇನಿಯಾದ ಎರೀ ಪಟ್ಟಣದ ಮತಗಟ್ಟೆಗಳ ಮುಂದೆಯೂ ಸರತಿಯ ಸಾಲು ಕಂಡುಬಂತು.
ಟ್ರಂಪ್ ಮತ್ತು ಕಮಲಾ ನಡುವೆ ಸಮಬಲದ ಪೈಪೋಟಿ ನಡೆಯಲಿದೆ ಎಂದು ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಮತದಾನಕ್ಕೂ ಮುನ್ನಾದಿನವಾದ ಸೋಮವಾರ ಇವರಿಬ್ಬರೂ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಮತದಾರರನ್ನು ಸೆಳೆಯಲು ಕೊನೆಯ ಹಂತದ ಕಸರತ್ತು ನಡೆಸಿದರು.
ಪೆನ್ಸಿಲ್ವೇನಿಯಾ ಒಳಗೊಂಡಂತೆ ಏಳು 'ಬ್ಯಾಟಲ್‌ಗ್ರೌಂಡ್ ರಾಜ್ಯ'ಗಳು ಎನಿಸಿರುವ ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್, ನೆವಾಡ ಮತ್ತು ಉತ್ತರ ಕೆರೊಲಿನಾ ರಾಜ್ಯಗಳು ಇಬ್ಬರ ಪಾಲಿಗೂ ನಿರ್ಣಾಯಕ ಎನಿಸಿವೆ. ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.
ಅಮೆರಿಕದ ಜನಗಣತಿ ಬ್ಯೂರೊ ಪ್ರಕಾರ, 15.5 ಕೋಟಿ ಅಮೆರಿಕನ್ನರು ಮತದಾನ ಮಾಡಲು ಅರ್ಹರಾಗಿದ್ದಾರೆ. 8.2 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್ (ಮೇಲ್-ಇನ್ ವೋಟಿಂಗ್) ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲಾರಿಡಾ ವಿ.ವಿ ನೀಡಿರುವ ಅಂಕಿ ಅಂಶಗಳು ಹೇಳಿವೆ. ಉಳಿದವರು ಮಂಗಳವಾರ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಿದರು.
ಕಮಲಾ ಅವರು ಈ ಹಿಂದೆಯೇ ಆನ್‌ಲೈನ್‌ನಲ್ಲಿ ಮತ ಹಾಕಿದ್ದರೆ, ಟ್ರಂಪ್ ಅವರು ಮಂಗಳವಾರ ಫ್ಲಾರಿಡಾದಲ್ಲಿ ಮತ ಚಲಾಯಿಸಿದರು.
ಉತ್ತರ ಕೆರೊಲಿನಾದ ಶಾರ್ಲೊಟ್ ನಗರದ ಮತಗಟ್ಟೆಯೊಂದರ ಮುಂದೆ ಸಾಲುಗಟ್ಟಿ ನಿಂತಿದ್ದ ಮತದಾರರು -ಎಎಫ್‌ಪಿ ಚಿತ್ರಕಮಲಾ ಹ್ಯಾರಿಸ್ ಗೆದ್ದರೆ...
* ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸುವರು * ಈ ಹುದ್ದೆಗೇರಿದ ಮೊದಲ ವರ್ಣೀಯ ಮತ್ತು ದಕ್ಷಿಣ ಏಷ್ಯಾ ಮೂಲದ ಮಹಿಳೆ ಎನಿಸಿಕೊಳ್ಳುವರು * ಕಳೆದ 32 ವರ್ಷಗಳಲ್ಲಿ ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಯಾರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಿಲ್ಲ. ಕಮಲಾ ಗೆದ್ದರೆ ಆ ಸಾಧನೆ ತಮ್ಮದಾಗಿಸುವರು
ಟ್ರಂಪ್ ಗೆದ್ದರೆ...
* ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ ಅಭ್ಯರ್ಥಿ ಎನಿಸಿಕೊಳ್ಳುವರು * ಕಳೆದ 132 ವರ್ಷಗಳಲ್ಲಿ ಒಮ್ಮೆ ಸೋತು ಮತ್ತೊಂದು ಅವಧಿಗೆ ಸ್ಪರ್ಧಿಸಿ ಯಾರೂ ಗೆದ್ದಿಲ್ಲ. ಟ್ರಂಪ್ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ * ಗಂಭೀರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥನಾದ ವ್ಯಕ್ತಿ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಿದಂತಾಗಲಿದೆ