ಬದಿಯಡ್ಕ: ವಯೋಜನರಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರೂ ಅದು ಅವರಿಗೆ ಸರಿಯಾಗಿ ಲಭಿಸದೇ ಇರುವುದು ಖೇದಕರ. ಅದಕ್ಕೆ ಪೂರಕವೆಂಬಂತೆ ಬದಿಯಡ್ಕದ ವಯೋಜನರ ಹಗಲು ವಿಶ್ರಾಂತಿ ಗೃಹವನ್ನು ಹಿರಿಯರಿಗೆ ನೀಡದೆ ಅವರನ್ನು ವಂಚಿಸಲಾಗಿದೆ. ವಯೋಜನರ ಹಿತದೃಷ್ಟಿಯನ್ನಿಟ್ಟುಕೊಂಡು ಕೂಡಲೇ ವಿಶ್ರಾಂತಿ ಗೃಹವನ್ನು ಅವರಿಗೆ ಹಿಂತಿರುಗಿಸಬೇಕೆಂದು ಖ್ಯಾತ ಉದ್ಯಮಿ ಬಲಿಪಗುಳಿ ರಾಜಾರಾಮ ಆಗ್ರಹಿಸಿದರು.
ಬದಿಯಡ್ಕ ಸಮೀಪದ ಪೆರ್ಮುಖ ಡಾ. ನಾರಾಯಣ ಪ್ರದೀಪ ಅವರ ನಿವಾಸದಲ್ಲಿ ಜರಗಿದ ಪೆರಡಾಲ ನವಜೀವನ ಹೈಸ್ಕೂಲಿನ 1962 ಮತ್ತು 1968 ತಂಡದ ಹಳೆ ವಿದ್ಯಾರ್ಥಿಗಳ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಮಾಜಿ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಮಾತನಾಡಿ, ಬದಿಯಡ್ಕದ ವಯೋಜನರ ಹಗಲು ವಿಶ್ರಾಂತಿ ಗೃಹವನ್ನು ಸದುಪಯೋಗಪಡಿಸಿಕೊಳ್ಳುತ್ತಾ ಊರಿನ ಹಿರಿಯರು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದರು. ಇದೀಗ ಅದೇ ಮನೆಯಲ್ಲಿ ಹೋಮಿಯೋ ಆಸ್ಪತ್ರೆಯನ್ನು ತೆರೆದು ವಯೋಜನರಿಗೆ ಒಂದುಗೂಡಲು ಸ್ಥಳವಿಲ್ಲದಂತಾಗಿದೆ ಎಂದರು.
ಮಂಗಳೂರಿನಲ್ಲಿ ನೆಲೆಸಿರುವ ಕರ್ನಾಟಕದ ನಿವೃತ್ತ ಎಸ್.ಐ.ವಸಂತ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಸಂಪತ್ತಿಲ ಶಂಕರ ನಾರಾಯಣ ಭಟ್ ವಂದಿಸಿದರು.