ಉಪ್ಪಳ:ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಕೇರಳ ಶಾಲಾ ಕಲೋತ್ಸವಗಳು ಅತ್ಯಂತ ಜನಪ್ರಿಯವಾಗಿ ನಿರ್ವಹಿಸಲ್ಪಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೂ ಮೌಲ್ಯ ಕಲ್ಪಿಸಿ ಸಾಧ್ಯವಾದಷ್ಟು ಬೆಂಬಲ ನೀಡುವಲ್ಲಿ ಸರ್ಕಾರ ಬದ್ದವಾಗಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಸೋಮವಾರದಿಂದ ಆರಂಭಗೊಂಡ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ಮಂಗಳವಾರ ಔಪಚಾರಿಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಹುಭಾಷಾ ನೆಲವಾದ ಮಂಜೇಶ್ವರ ಉಪಜಿಲ್ಲೆಯಲ್ಲಿರುವ ವಿವಿಧ ಶಾಲೆಗಳು ಕಲಿಕೆಯ ಜೊತೆಗೆ ಕಲಿಕೇತರ ವಿಷಯಗಳಲ್ಲೂ ಮೇರು ದಾಖಲೆ ಸ್ಥಾಪಿಸಿರುವುದು ಇಲ್ಲಿಯ ಹಿರಿಮೆ. ಶಿಕ್ಷಕರ, ಪೋಷಕರ ನಿರಂತರ ಪ್ರೋತ್ಸಾಹ ಸ್ತುತ್ಯರ್ಹವೆಂದು ಅವರು ತಿಳಿಸಿದರು.
ಮಂಗಲ್ಪಾಡಿ ಗ್ರಾಮ ಪಣಚಾಯತಿ ಅಧ್ಯಕ್ಷೆ ರುಬೀನಾ ನೌಫಲ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಗೋಲ್ಡನ್ ರಹ್ಮಾನ್, ಉದ್ಯಮಿ ಅಬ್ದುಲ್ ಲತೀಫ್ ಉಪ್ಪಳ ಗೇಟ್, ಮಂಜೇಸ್ವರ ಬ್ಲಾ.ಪಂ.ಉಪಾಧ್ಯಕ್ಷ ಹನೀಫ್ ಪಿ.ಕೆ., ಕಾಸರಗೋಡು ಡಿವೈಎಸ್‍ಪಿ ಸುನಿಲ್ ಕುಮಾರ್ ಸಿ.ಕೆ, ಕಣ್ಣೂರು ವಲಯ ಆರ್.ಡಿ.ಡಿ. ರಾಜೇಶ್ ಕುಮಾರ್, ಕಾಸರಗೋಡು ಡಿಡಿಇ ಮಧುಸೂದನನ್ ಟಿ.ವಿ., ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜೊತೆಗೆ ಮಂಜೇಶ್ವರ ಬ್ಲಾ.ಪಂ., ಮಂಗಲ್ಪಾಡಿ ಗ್ರಾ.ಪಂ., ಹಾಗೂ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು. ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಶ್ರೀಕುಮಾರ್ ಎಂ.ಎ.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ್ವಾಗತ ಸಮಿತಿ ಕನ್ವೀನರ್ ಹಸೀನ ಎನ್.ಎ.ವಂದಿಸಿದರು.
ಮಂಗಲ್ಪಾಡಿ ಶಾಲಾ ಆವರಣ(ಐಲ), ಎಜೆಐ ಶಾಲೆ ಹಾಗೂ ಲಯನ್ಸ್ ಸೇವಾ ಮಂದಿರ ನಯಾಬಝಾರ್ ಗಳಲ್ಲಾಗಿ ವ್ಯವಸ್ಥೆಗೊಳಿಸಿರುವ ವೇದಿಕೆಗಳಲ್ಲಿ ಉಪಜಿಲ್ಲಾ ವ್ಯಾಪ್ತಿಯ 98 ಶಾಲೆಗಳ 5 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ನಾಲ್ಕು ದಿನಗಳ ಕಲೋತ್ಸವದಲ್ಲಿ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ವೇದಿಕೆ ಹಾಗೂ ವೇದಿಕೆಯೇತರ ವಿಭಾಗಗಳಲ್ಲಾಗಿ 356 ವಿಷಯಗಳ ಸ್ಪರ್ಧೆಗಳು ನಡೆಯುತ್ತಿವೆ. ಗುರುವಾರ ಸಂಜೆ ಸಮಾರೋಪ ನಡೆಯಲಿದೆ.
ವಿಶೇಷತೆ:
ಹಸಿರು ಕೇರಳ ಮಿಷನ್ ನಿರ್ದೇಶಾನುಸಾರ ಕಲೋತ್ಸವ ನಡೆಯುವ ಎಲ್ಲಾ ವೇದಿಕೆಗಳ ಸುತ್ತುಮುತ್ತ ಹಸಿರು ಕಸತೊಟ್ಟಿ ನಿರ್ಮಿಸುರುವುದು ಗಮನಾರ್ಹವಾಯಿತು. ತೆಂಗಿನ ಗರಿಗಳಿಂದ ಕಸತೊಟ್ಟಿ ನಿರ್ಮಿಸಲಾಗಿದೆ.