ಅಮರಾವತಿ: ಅಮೆರಿಕದ ಉಪಾಧ್ಯಕ್ಷರಾಗಿ ಜೆ.ಡಿ. ವ್ಯಾನ್ಸ್ ಚುನಾಯಿತರಾಗಿರುವುದನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಇದೇ ಮೊದಲ ಬಾರಿಗೆ ಅಮೆರಿಕದ ಎರಡನೇ ಮಹಿಳೆಯಾಗಿ ತೆಲುಗು ಪರಂಪರೆಯ ಉಷಾ ಚಿಲುಕುರಿ ಸೇವೆ ಸಲ್ಲಿಸಲಿರುವುದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ. ವ್ಯಾನ್ಸ್ ಅವರು ಆಂಧ್ರಪ್ರದೇಶದ ಅಳಿಯ ಆಗಿದ್ದು, ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಅವರು ತೆಲುಗು ಮೂಲದವರಾಗಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಚಂದ್ರಬಾಬು ನಾಯ್ದು, 'ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ.ವ್ಯಾನ್ಸ್ ಅವರಿಗೆ ಅಭಿನಂದನೆಗಳು. ಆಂಧ್ರಪ್ರದೇಶದಲ್ಲಿ ಬೇರೂರಿರುವ ತೆಲುಗು ಪರಂಪರೆಯ ಉಷಾ ವ್ಯಾನ್ಸ್ ಅವರು ಅಮೆರಿಕದ ಎರಡನೇ ಮಹಿಳೆಯಾಗಲಿರುವುದು ವಿಶ್ವದಾದ್ಯಂತದ ತೆಲುಗು ಭಾಷಿಗರಿಗೆ ಹೆಮ್ಮೆಯ ಕ್ಷಣವಾಗಿದೆ' ಎಂದು ಹೇಳಿದ್ದಾರೆ.
ಇದೇ ವೇಳೆ ಆಂಧ್ರಪ್ರದೇಶಕ್ಕೆ ಭೇಟಿ ನೀಡಲು ಜೆ.ಡಿ. ವ್ಯಾನ್ಸ್ ದಂಪತಿಗೆ ಆಹ್ವಾನವನ್ನು ನೀಡಿದ್ದಾರೆ.
ಮಗದೊಂದು ಪೋಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೂ ಚಂದ್ರಬಾಬು ನಾಯ್ದು ಅಭಿನಂದನೆ ಸಲ್ಲಿಸಿದ್ದಾರೆ.
'ಭಾರತ ಹಾಗೂ ಅಮೆರಿಕ ಬಾಂಧವ್ಯ ಗಟ್ಟಿಗೊಳಿಸಲು ಟ್ರಂಪ್ ಅವರ ಮೊದಲ ಅವಧಿಯು ಗಮನಾರ್ಹ ಪಾತ್ರ ವಹಿಸಿತು. ಈಗ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಮುಂದಾಳತ್ವದಲ್ಲಿ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ದೃಢಗೊಳ್ಳುವ ನಂಬಿಕೆ ನನಗಿದೆ' ಎಂದು ಹೇಳಿದ್ದಾರೆ.