ಕಾಸರಗೋಡು: ಧಾರ್ಮಿಕ ಸಾಂಸ್ಕೃತಿಕ ರಾಯಭಾರಿ ಶಿಕ್ಷಣ, ಸಾಹಿತ್ಯ,ಸಮಾಜ ಸೇವೆ, ಕನ್ನಡ, ತುಳು ಭಾಷಾ ಸಂಘಟನೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಕೆ. ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಕೇರಳ- ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.
ಕಾಸರಗೋಡು ಎಸ್. ವಿ. ಟಿ ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ಸ್ಥಾಪಕ ನಿರ್ದೇಶಕ, ನಗರದ ಹಲವು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ ಮಾರ್ಗದರ್ಶಕರಾಗಿದ್ದು, ತೆಂಕುತಿಟ್ಟು ಯಕ್ಷಗಾನವನ್ನು ಮಕ್ಕಳಿಗೆ ತರಬೇತು ನೀಡಿ, ಯಕ್ಷಗಾನ ಮೇಳವನ್ನು ಕಟ್ಟಿ ಬೆಳೆಸುತ್ತಿರುವ ಸಾಧನೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಸರಗೋಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ)ಅಧ್ಯಕ್ಷ,ಹಿರಿಯ ವೈದ್ಯಾಧಿಕಾರಿ ಡಾ. ಹರಿಕಿರಣ್ ಬಂಗೇರ ಅವರು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣೆಕೆ, ಅಭಿನಂದನಾ ಪತ್ರವನ್ನಿತ್ತು ಸನ್ಮಾನಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಸನ್ಮಾನಪತ್ರ ವಾಚಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರ ಸಭೆಯ ಕೌನ್ಸಿಲರ್ ಗಳಾದ ಕೆ. ವರಪ್ರಸಾದ ಕೋಟೆಕಣಿ, ಶಾರದಾ ಬಿ, ಹೇಮಲತಾ ಕಾಸರಗೋಡು, ಸಂಘಟಕಿ ಆಯಿಷಾ ಎ.ಎ. ಪೆರ್ಲ, ಲವ ಕೆ. ಮೀಪುಗುರಿ, ಸಾಹಿತಿ,ಕವಿ ರಾಧಾಕೃಷ್ಣ ಕೆ.ಉಳ್ಳಿಯತ್ತಡ್ಕ, ಕೆ. ವಿ. ರಮೇಶ್, ಪ್ರೇಮ್ ಕಿಶೋರ್ ಕುಂಬಳೆ, ಕವಿ, ಸಂಘಟಕ ಸುಭಾಷ್ ಪೆರ್ಲ, ಸಮ್ಮೇಳನ ಸರ್ವಾಧ್ಯಕ್ಷೆ ಕು.ಹರ್ಷಿತಾ ಪಿ.ಬದಿಯಡ್ಕ , ದಿವಾಕರ ಪಿ ಅಶೋಕನಗರ ಉಪಸ್ಥಿತರಿದ್ದರು.