ನವದೆಹಲಿ: ₹2,800 ಕೋಟಿ ಮೌಲ್ಯದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಂದೆ-ಮಗನನ್ನು ಕೋಲ್ಕತ್ತದಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
ಪ್ರಯಾಗ್ ಗ್ರೂಪ್ ಕಂಪನಿ ಪ್ರವರ್ತಕರಾದ ಬಸುದೇಬ್ ಬಾಗ್ಚಿ ಮತ್ತು ಅವರ ಮಗ ಅವೀಕ್ ಬಾಗ್ಚಿ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಇ.ಡಿ ಬಂಧಿಸಿದೆ.
ನ್ಯಾಯಾಲಯವು ಇವರನ್ನು 10 ದಿನಗಳ ಇ.ಡಿ ವಶಕ್ಕೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ನವೆಂಬರ್ 26ರಂದು ಕೋಲ್ಕತ್ತ ಮತ್ತು ಮುಂಬೈನಲ್ಲಿರುವ ಆರೋಪಿಗಳಿಬ್ಬರ ಮತ್ತು ಇತರ ಕೆಲವು ವ್ಯಕ್ತಿಗಳ ನಿವೇಶನಗಳ ಮೇಲೆ ಇ.ಡಿ ದಾಳಿ ನಡೆಸಿತ್ತು.
ಹೆಚ್ಚಿನ ಆದಾಯ ಗಳಿಸುವಂತಹ ನಕಲಿ ಮಾಸಿಕ ಆದಾಯ ಯೋಜನೆಗಳು, ಷೇರುಗಳು ಮತ್ತು ಕ್ಲಬ್ ಸದಸ್ಯತ್ವದ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಜನರಿಂದ ₹2,800 ಕೋಟಿ ಮೌಲ್ಯದ ಠೇವಣಿಯನ್ನು ಸಂಗ್ರಹಿಸಿದ್ದು, ₹1,900 ಕೋಟಿ ಹಣವನ್ನು ಹೂಡಿಕೆದಾರರಿಗೆ ಮರುಪಾವತಿಸದೆ ವಂಚಿಸಿದ್ದಾರೆ ಎಂದು ಇ.ಡಿ ತಿಳಿಸಿದೆ.
ಸಂಸ್ಥೆ ನಡೆಸಲು ಆರ್‌ಬಿಐ ಮತ್ತು ಸೆಬಿ ನಿಯಂತ್ರಕ ಸಂಸ್ಥೆಗಳಿಂದ ಬೇಕಾದ ಅಗತ್ಯ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಕಂಪನಿ ನಡೆಸುತ್ತಿದ್ದರು.