ಪೆರ್ಲ: ಮಂಗಳೂರಿನ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಹಾಗೂ ಕಲ್ಕೂರ ಪ್ರತಿಷ್ಠಾದ ಕನ್ನಡ ರಾಜ್ಯೋತ್ಸವದಂಗವಾಗಿ ನೀಡಲ್ಪಡುವ ಪ್ರತಿಷ್ಠಿತ ರಾಜ್ಯೋತ್ಸವ ಗಡಿನಾಡ ಸಾಧಕ ಪ್ರಶಸ್ತಿಯನ್ನು ಯುವ ಯಕ್ಷ ಪ್ರತಿಭೆ ಗಡಿನಾಡದ ಕಾಟುಕುಕ್ಕೆ ಗ್ರಾಮದ ಸ್ಕಂದ ಸಿ.ಯಸ್.ಗೆ ಪ್ರದಾನಿಸಲಾಯಿತು.
ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳಗಳೆರಡಲ್ಲಿಯೂ ಸವ್ಯಸಾಚಿ ಪ್ರತಿಭೆಯಾದ ಸ್ಕಂದ ರಾಜ್ಯ ಪ್ರಶಸ್ತಿ ಪುರಸ್ಕøತ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್‍ರಲ್ಲಿ ಯಕ್ಷಗಾನ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿ ಹಾಗೂ ನಾರಾಯಣ ಶರ್ಮ ನೀರ್ಚಾಲು ಕಾಟುಕುಕ್ಕೆ ಇವರಿಂದ ಹಿಮ್ಮೇಳ ವಾದನ, ಶಿವಾನಂದ ಉಪ್ಪಳ ಇವರಿಂದ ತಬಲ ವಾದನ ಕರಗತಗೈಯುತ್ತಿದ್ದಾನೆ.
ಯಕ್ಷಗಾನದ ಪುಂಡುವೇಷ, ಕಿರೀಟ ವೇಷಗಳಲ್ಲಿ ಮಿಂಚುವ ಈತ 2023-24ನೇ ವರ್ಷದ ಕೇರಳ ರಾಜ್ಯ ಮಟ್ಟ ಶಾಲಾಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಎಗ್ರೇಡಿನೊಂದಿಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾನೆ. ಶಾಲೆಯ ಪಠ್ಯೇತರ ಚಟುವಟಿಕೆಗಳಾದ ವಿಜ್ಞಾನ ಮೇಳ, ರಸಪ್ರಶ್ನೆ, ಚಿತ್ರಕಲೆ ಹೀಗೆ ಬಹುಮುಖಿ ಪ್ರತಿಭಾ ರಂಗದಲ್ಲಿ ತೊಡಗಿಸಿಕೊಂಡಿರುವ ಸ್ಕಂದ ಸಿ.ಯಸ್ ಗೆ ರಾಜ್ಯೋತ್ಸವದಂಗವಾಗಿ ಮಂಗಳೂರು ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಿಟ್ಟೆ ಯುನಿವರ್ಸಿಟಿಯ ಡಾ.ಶಾಂತರಾಮ ಶೆಟ್ಟಿ, ಪ್ರೊ.ಎಂ.ಬಿ.ಪುರಾಣಿಕ್, ,ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಆಕಾಶವಾಣಿ ಗುಲ್ಬರ್ಗ ವಿಭಾಗದ ಕಾರ್ಯ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಚಂದ್ರಹಾಸ ಮಾಸ್ತರ್,ಸಹನಾ ಅರೆಕ್ಕಾಡಿ,ನಾಟ್ಯ ವಿದುಷಿ ಕಮಲ ಭಟ್ ಮೊದಲಾದವರು ಉಪಸ್ಥಿತರಿದ್ದರು.