ಮಂಜೇಶ್ವರ : ಮಂಜೇಶ್ವರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪ್ರಸಿದ್ದಿಯನ್ನು ಪಡೆಯುತ್ತಿರುವ ಕುಂಡು ಕೊಳಕೆ ಬೀಚ್ ಗೆ ಆಗಮಿಸುವ ಪ್ರವಾಸಿಗರು ಸಮುದ್ರದ ಸೌಂದರ್ಯವನ್ನು ಸವಿಯಲು ಕುಳಿತುಕೊಳ್ಳುವ ಆಸನ ವ್ಯವಸ್ಥೆ ನೂತನವಾಗಿ ಸ್ಥಾಪಿಸಲಾಯಿತು. ಪ್ರವಾಸಿಗರು ಇಲ್ಲಿ ವಿಶ್ರಾಂತಿ ಪಡೆಯಲು ಹಾಗೂ ಸಮುದ್ರದ ದೃಶ್ಯಗಳನ್ನು ಅನುಭವಿಸಲು ಅನುಕೂಲವಾಗಲು ಈ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಹೊಸ ಸೌಲಭ್ಯವು ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಕ ಅನುಭವವನ್ನು ಒದಗಿಸಲಿದೆ.ಇದು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಹಾಯಕವಾಗಲಿದೆ.
ಮಂಜೇಶ್ವರ ಗ್ರಾಮ ಪಂಚಾಯತಿ 19ನೇ ವಾರ್ಡ್ ಸದಸ್ಯೆ ಮುಂತಾಸ್ ಸಮೀರ ಅವರ ನೇತೃತ್ವದಲ್ಲಿ ವಿಶಾಲ ಮನಸ್ಕರ ಸಹಾಯದೊಂದಿಗೆ ನಿರ್ಮಿಸಲಾದ ಆಸನದ ಅಧಿಕೃತ ಉದ್ಘಾಟನೆಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಶನಿವಾರ ನೆರವೇರಿಸಿದರು.
ವಾರ್ಡ್ ಸದಸ್ಯೆ ಮುಂತಾಸ್ ಸಮೀರ ಅವರ ನೇತೃತ್ವದಲ್ಲಿ ಬೀಚ್ ಪ್ರದೇಶವನ್ನು ಇನ್ನಷ್ಟು ಸುಂದರಗೊಳಿಸಲು ಹಾಗೂ ಪ್ರೇಕ್ಷಕ ಸ್ನೇಹಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಉಪಕ್ರಮವು ಸ್ಥಳೀಯ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿರುವುದಾಗಿ ಸಮಾರಂಭದಲ್ಲಿ ಪಾಲ್ಗೊಂಡವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಂಚಾಯತಿ ಅಧ್ಯಕ್ಷ ಜೀನ್ ಲವಿನ್ ಮೊಂತೆರೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ರಾಧಾ,ಸಾಮಾಜಿಕ ಕಾರ್ಯಕರ್ತ ಇಲ್ಯಾಸ್ ತೂಮಿನಾಡು, ಪಂಚಾಯತಿ ಸದಸ್ಯರು, ಪ್ರದೇಶದ ಪ್ರಮುಖ ವ್ಯಕ್ತಿತ್ವಗಳು, ಗ್ರಾಮಸ್ಥರು, ಕಾರ್ಯದರ್ಶಿ ಸೇರಿದಂತೆ ಸ್ಥಳೀಯಾಡಳಿತದ ಉದ್ಯೋಗಸ್ಥರು, ಹಸಿರು ಸೇನಾ ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.
ಸಮುದ್ರ ತೀರದಲ್ಲಿ ಸುಂದರ ದೃಶ್ಯಾವಳಿಗಳೊಂದಿಗೆ ಅನುಭವಿಸುವ ಅನುಕೂಲಕರವಾದ ವಾತಾವರಣ ನಿರ್ಮಾಣದೊಂದಿಗೆ ಪ್ರವಾಸಿಗರಿಗೆ ಆಸನದಲ್ಲಿ ಕೂತು ವಿಶ್ರಾಂತಿ ಪಡೆಯುವುದರ ಜೊತೆಯಾಗಿ ಪೋಟೋ ಶೂಟ್ ಹಾಗೂ ಸಂತೋಷದೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶ ಲಭಿಸಿದಂತಾಗಿದೆ.