ನವದೆಹಲಿ: ಹೆದ್ದಾರಿಗಳಲ್ಲಿ ದಟ್ಟ ಮಂಜು ಆವರಿಸುವುದರಿಂದ ವಾಹನಗಳ ಚಾಲಕರಿಗೆ ರಸ್ತೆಯು ಸ್ಪಷ್ಟವಾಗಿ ಕಾಣುವುದಿಲ್ಲ. ಹಾಗಾಗಿ, ಅಧಿಕಾರಿಗಳು ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಗುರುವಾರ ನಿರ್ದೇಶನ ನೀಡಿದೆ.
ರಸ್ತೆಯಲ್ಲಿ ಇಳಿಜಾರು ಗುರುತಿಸುವಿಕೆ, ಸಿಗ್ನಲ್ ಪುನರ್ ಸ್ಥಾಪನೆ ಅಥವಾ ಬದಲಾವಣೆ, ರಿಫ್ಲೆಕ್ಟಿವ್ (ಮಿನುಗುವ ದೀಪ) ಅಳವಡಿಕೆ, ಅಪಘಾತ ವಲಯದ ಗುರುತು, ಸೌರ ಫಲಕ ಅಳವಡಿಕೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.
ಕಡಿಮೆ ಗೋಚರತೆ ವೇಳೆ ಬಳಕೆದಾರರಿಗೆ ಎಚ್ಚರಿಕೆ ನೀಡಬೇಕು. ಮಂಜು ಆವರಿಸಿದಾಗ ವೇಗದ ಮಿತಿಯು ಗಂಟೆಗೆ 30 ಕಿ.ಮೀ ಇರಬೇಕು. ರೇಡಿಯೊ, ಸಾಮಾಜಿಕ ಮಾಧ್ಯಮಗಳ ಮೂಲಕ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ರಾತ್ರಿ ವೇಳೆ ಅಧಿಕಾರಿಗಳು ನಿಯಮಿತವಾಗಿ ಹೆದ್ದಾರಿ ಪರಿಶೀಲನೆ ನಡೆಸಬೇಕು. ಮಂಜು ಆವೃತವಾಗಿರುವ ಸ್ಥಳಗಳ ಸಮೀಪದಲ್ಲಿ ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಬೇಕು ಎಂದು ಹೇಳಿದೆ.