ಚೆನ್ನೈ: ತಂಜಾವೂರು ಜಿಲ್ಲೆಯ ಸೌಂದರಾಜ ಪೆರುಮಾಳ್ ದೇವಸ್ಥಾನದಿಂದ ಕಳವು ಆಗಿದ್ದ ತಿರುಮಂಗೈ ಆಳ್ವಾರ್ ಕಂಚಿನ ವಿಗ್ರಹವನ್ನು ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಶ್ಮೋಲಿಯನ್ ಮ್ಯೂಸಿಯಂನಿಂದ ತಮಿಳುನಾಡಿಗೆ ಮರಳಿ ತರಲಾಗುವುದು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಒಂದು ತಿಂಗಳೊಳಗೆ ಈ ವಿಗ್ರಹವನ್ನು ತಮಿಳುನಾಡಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ತಿರುಮಂಗೈ ಆಳ್ವಾರ್ ವಿಗ್ರಹದೊಂದಿಗೆ ಕಳವು ಆಗಿದ್ದ ಉಳಿದ ಮೂರು ವಿಗ್ರಹಗಳಾದ ಕಾಳಿಂಗ ನರ್ತ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯನ್ನು ಮರಳಿ ತರಲು ಸಿಐಡಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಕಳ್ಳಸಾಗಣೆಯಾಗಿದ್ದ ಈ ವಿಗ್ರಹವನ್ನು ಅಶ್ಮೋಲಿಯನ್ ಮ್ಯೂಸಿಯಂ 1967ರಲ್ಲಿ ಖರೀದಿಸಿತ್ತು. ಪುರಾತನ ಕಾಲದ ಈ ವಿಗ್ರಹ ಕಳ್ಳಸಾಗಣೆ ಆಗಿರುವ ಬಗ್ಗೆ ಸಾಕ್ಷ್ಯಗಳನ್ನು ರಾಜ್ಯದ ಸಿಐಡಿ ಸಲ್ಲಿಸಿದ ನಂತರ ವಿಗ್ರಹವನ್ನು ತಮಿಳುನಾಡಿಗೆ ಹಿಂದಿರುಗಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಒಪ್ಪಿಕೊಂಡಿದೆ. ತಮಿಳುನಾಡಿನ ಸಿಐಡಿ ಪೊಲೀಸರೊಂದಿಗೆ ನಡೆಸಿರುವ ಇತ್ತೀಚಿನ ಮಾತುಕತೆ ವೇಳೆ, ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸುವ ಬದ್ಧತೆಯನ್ನು ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
'ಲಂಡನ್‌ನಿಂದ ಭಾರತಕ್ಕೆ ವಿಗ್ರಹವನ್ನು ವರ್ಗಾಯಿಸಲು ತಗಲುವ ಎಲ್ಲ ವೆಚ್ಚಗಳನ್ನು ಭರಿಸುವುದಾಗಿ ವಿ.ವಿಯು ಭರವಸೆ ನೀಡಿದೆ. ಕಳ್ಳಸಾಗಣೆಯಾಗಿರುವ ವಿಗ್ರಹಗಳನ್ನು ಅವುಗಳ ಮೂಲ ಸ್ಥಾನಗಳಿಗೆ ಹಿಂದಿರುಗಿಸುವ ಪ್ರಯತ್ನಗಳಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.