ಪತ್ತನಂತಿಟ್ಟ: ಶಬರಿಮಲೆ ಹಾಗೂ ಮಾಳಿಗಪ್ಪುರಂಗೆ ಆಗಮಿಸುವ ಮರಿ ಅಯ್ಯಪ್ಪ ಸ್ವಾಮಿಗಳ ವ್ಯವಸ್ಥಿತ ದರ್ಶನಕ್ಕಾಗಿ ದೇವಸ್ವಂ ಮಂಡಳಿ ವಿಶೇಷ ಸರತಿ ಸಾಲು ಸಿದ್ಧಪಡಿಸಲಿದೆ.
ಈ ವಿಷಯವನ್ನು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ. ಮಕ್ಕಳು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಸಮಸ್ಯೆಯ ಬಗ್ಗೆ ಮಾಧ್ಯಮಗಳ ವರದಿ ಅನುಸರಿಸಿ ಈ ಕ್ರಮಕ್ಕೆ ಮುಂದಾಗಲಾಗಿದೆ.
ಪುಟಾಣಿ ಅಯ್ಯಪ್ಪನವರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದು ಹೆಚ್ಚಳಗೊಂಡಿದೆ. ಅನಾರೋಗ್ಯಕ್ಕೆ ತುತ್ತಾದ ಘಟನೆಗಳೂ ವರದಿಯಾಗುತ್ತಿವೆ. ಮಾಧ್ಯಮದವರ ಗಮನಕ್ಕೆ ತಂದ ನಂತರ ಘಟನೆ ಬೆಳಕಿಗೆ ಬಂದಿದೆ.
ನೀರು ಕೂಡ ಲಭಿಸದೆ ಮಕ್ಕಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ನೂಕುನುಗ್ಗಲು ಉಂಟಾಗಿ ಮಕ್ಕಳು ಗಾಯಗೊಂಡಿದ್ದಾರೆ ಎಂದು ಭಕ್ತರು ಪ್ರತಿಕ್ರಿಯಿಸಿದ್ದಾರೆ.
ಭಕ್ತರ ನೂಕುನುಗ್ಗಲು ನಿಯಂತ್ರಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಕ್ಕಳು, ಭಕ್ತರು ಮತ್ತು ಹಿರಿಯ ನಾಗರಿಕರನ್ನು ಪರಿಗಣಿಸಿ ದೇಗುಲದ ಮುಂಭಾಗದಲ್ಲಿ ದರ್ಶನದ ಸೌಲಭ್ಯ ಕಲ್ಪಿಸಲಾಗುವುದು ಎಂದು ದೇವಸ್ವಂ ಅಧ್ಯಕ್ಷರು ತಿಳಿಸಿದರು.