ಇಂದೋರ್: ದೇಶದ ಅತ್ಯಂತ ಸ್ವಚ್ಛ ನಗರ ಎನಿಸಿರುವ ಮಧ್ಯಪ್ರದೇಶದ 'ಆರ್ಥಿಕ' ರಾಜಧಾನಿ ಇಂದೋರ್‌ನಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಶುಕ್ರವಾರ 400ರ ಗಡಿ ದಾಟಿದ್ದು, 'ತೀವ್ರ ಕಳಪೆ' ಮಟ್ಟಕ್ಕೆ ಕುಸಿದಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ, ನಗರದ ಛೋಟಿ ಗ್ವಾಲ್ಟೊಲಿ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆಗೆ ಎಕ್ಯೂಐ 404ಕ್ಕೆ ತಲುಪಿದೆ.
ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಛೋಟಿ ಗ್ವಾಲ್ಟೊಲಿಯಲ್ಲಿ ವಾಹನ ದಟ್ಟಣೆಯೂ ಅಧಿಕವಾಗಿದೆ.
'ನಗರದಲ್ಲಿ ದೀಪಾವಳಿ ಅಂಗವಾಗಿ ಗುರುವಾರ ಬೆಳಿಗ್ಗೆಯೇ ಶುರುವಾದ ಪಟಾಕಿ ಸಿಡಿತ ತಡರಾತ್ರಿ ವರೆಗೂ ಮುಂದುವರಿದಿತ್ತು. ಅದು ಹಲವು ಸ್ಥಳಗಳಲ್ಲಿ ಶುಕ್ರವಾರವೂ ಮುಂದುವರಿದಿದೆ. ಗಾಳಿಯ ಗುಣಮಟ್ಟ ಹದಗೆಟ್ಟು, ಎಕ್ಯೂಐ 'ತೀವ್ರ ಕಳಪೆ' ವರ್ಗಕ್ಕೆ ಕುಸಿಯಲು ಇದು ಪ್ರಮುಖ ಕಾರಣ' ಎಂದು ಪರಿಸರ ತಜ್ಞ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧಿಕಾರಿ ಡಾ. ದಿಲೀಪ್ ವಘೇಲಾ ಹೇಳಿದ್ದಾರೆ.
ನಗರದಲ್ಲಿ ಗಾಳಿಯ ಗುಣಮಟ್ಟವು ಸಾಮಾನ್ಯವಾಗಿ 'ಸಮಾಧಾನಕರ' (ಎಕ್ಯೂಐ 51-100) ಮಟ್ಟದಲ್ಲೇ ಇರುತ್ತದೆ ಎಂದೂ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ನಗರದಲ್ಲಿ ಇಂದು ಬೆಳಿಗ್ಗೆ 8.30ರ ಹೊತ್ತಿಗೆ ಗಾಳಿ ಬೀಸುವ ವೇಗ ಶೂನ್ಯ ಸ್ಥಿತಿಯಲ್ಲಿತ್ತು ಎನ್ನಲಾಗಿದೆ.
ಅಧ್ಯಯನದ ಪ್ರಕಾರ, ಸಾಮಾನ್ಯ ಸಂದರ್ಭಗಳಲ್ಲಿ ನಗರದ ಗಾಳಿ ಗುಣಮಟ್ಟ ಕುಸಿಯಲು ವಾಹನಗಳಿಂದ ಆಗುವ ಮಾಲಿನ್ಯ ಮತ್ತು ರಸ್ತೆ ಮೇಲಿನ ಧೂಳು ಶೇ 70 ರಷ್ಟು ಕೊಡುಗೆ ನೀಡುತ್ತದೆ.
'ಎಕ್ಯೂಐ' ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎನ್ನಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ಅತ್ಯಂತ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.