ವಾಷಿಂಗ್ಟನ್: ಕೆನಡಾ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ, ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಅಮೆರಿಕನ್ನರು ಒಗ್ಗಟ್ಟಿನ ರ‍್ಯಾಲಿ ನಡೆಸಿದರು.
'ಖಾಲಿಸ್ತಾನಿ ಭಯೋತ್ಪಾದನೆಯನ್ನು ನಿಲ್ಲಿಸಿ, ಕೆನಡಾದಲ್ಲಿನ ಹಿಂದೂಗಳನ್ನು ರಕ್ಷಿಸಿ', 'ಇಸ್ಲಾಂ ಭಯೋತ್ಪಾದನೆಯನ್ನು ನಿಲ್ಲಿಸಿ, ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ರಕ್ಷಿಸಿ' ಎಂಬ ಘೋಷಣೆಗಳು ಮಿಲ್ಪಿಟಾಸ್ ಸಿಟಿ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಮೊಳಗಿದವು.
ಅಲ್ಪಸಂಖ್ಯಾತ ಹಿಂದೂಗಳ ಮೇಲೆ ವಿವಿಧೆಡೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ ಪ್ರಮುಖ ನಾಯಕರು, ಕೆನಡಾ ಮತ್ತು ಬಾಂಗ್ಲಾದೇಶ ಸರ್ಕಾರಗಳು ತಮ್ಮ ರಾಷ್ಟ್ರದಲ್ಲಿರುವ ಹಿಂದೂ ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಈ ಎರಡೂ ದೇಶದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸುವಂತೆ ಅಮೆರಿಕದ ನಾಯಕರನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾದ ದೇಗುಲದಲ್ಲಿನ ಪೂಜೆಯಲ್ಲಿ ಭಾಗಿಯಾಗಿದ್ದ ಹಿಂದೂಗಳ ಮೇಲೆ ಖಾಲಿಸ್ತಾನಿ ಉಗ್ರರು ಈಚೆಗೆ ನಡೆಸಿದ ದಾಳಿಯನ್ನು ಕೆನಡಾ ಸರ್ಕಾರವು ಸಮರ್ಪಕವಾಗಿ ನಿಭಾಯಿಸದಿರುವುದಕ್ಕೆ ಸಭೆಯಲ್ಲಿ ಭಾಗಿಯಾಗಿದ್ದವರು ಬೇಸರ ವ್ಯಕ್ತಪಡಿಸಿದರು ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.