ನವದೆಹಲಿ: ಪದವಿ ವಿದ್ಯಾರ್ಥಿಗಳು ತಾವು ಕಲಿಯಲು ಬಯಸುವ ಕೋರ್ಸ್‌ಗಳ ನಿಗದಿತ ಅವಧಿಯನ್ನು ಕಡಿಮೆ ಮಾಡುವ ಅಥವಾ ವಿಸ್ತರಿಸುವ ಆಯ್ಕೆಯನ್ನು ಶೀಘ್ರದಲ್ಲೇ ಪಡೆಯಲಿದ್ದಾರೆ.
ವಿದ್ಯಾರ್ಥಿಗಳಿಗೆ ಇಂತಹ ಆಯ್ಕೆಯನ್ನು ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳು ಆಕ್ಸಲರೇಟೆಡ್ ಡಿಗ್ರಿ ಪ್ರೋಗ್ರಾಮ್ (ಎಡಿಪಿ) ಮತ್ತು ಎಕ್ಸ್‌ಟೆಂಡೆಡ್ ಡಿಗ್ರಿ ಪ್ರೋಗ್ರಾಮ್ (ಇಡಿಪಿ) ನೀಡಲಿಕ್ಕಾಗಿ ರಚಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನಕ್ಕೆ (ಎಸ್‌ಒಪಿ) ಈಚೆಗೆ ನಡೆದ ಸಭೆಯಲ್ಲಿ ಯುಜಿಸಿ ಅನುಮೋದನೆ ನೀಡಿದೆ. ಕರಡು ಮಾನದಂಡಗಳನ್ನು ಸಂಬಂಧಪಟ್ಟ ಭಾಗೀದಾರರಿಂದ ಪ್ರತಿಕ್ರಿಯೆಗಾಗಿ ಸಾರ್ವಜನಿಕರ ಮುಂದೆ ಇಡಲಾಗುತ್ತದೆ.
'ಪದವಿ ಕೋರ್ಸ್‌ಗೆ ಪ್ರವೇಶ ಪಡೆಯುವ ವೇಳೆ ವಿದ್ಯಾರ್ಥಿಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಅಧ್ಯಯನದ ಅವಧಿಯನ್ನು ಕಡಿಮೆ ಮಾಡಲು ಅಥವಾ ವಿಸ್ತರಿಸಲು ಈ ಆಯ್ಕೆಗಳನ್ನು ಬಳಸಿಕೊಳ್ಳಬಹುದು' ಎಂದು ಜಗದೀಶ್ ಕುಮಾರ್ ಹೇಳಿದರು.
'ಮೂರು ವರ್ಷ ಅಥವಾ ನಾಲ್ಕು ವರ್ಷಗಳ ಪದವಿಯನ್ನು ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಎಡಿಪಿ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತದೆ. ಇಡಿಪಿ ಪದವಿ ವ್ಯಾಸಂಗದ ಅವಧಿಯನ್ನು ವಿಸ್ತರಿಸಲು ಅವಕಾಶ ನೀಡುತ್ತದೆ' ಎಂದು ವಿವರಿಸಿದರು.
'ಎಲ್ಲ ರೀತಿಯ ಉದ್ಯೋಗ ಮತ್ತು ಶೈಕ್ಷಣಿಕ ಉದ್ದೇಶಗಳಿಗೆ ಸಾಮಾನ್ಯ ಅವಧಿಯ ಪದವಿಯನ್ನು ಹೇಗೆ ಪರಿಗಣಿಸಲಾಗುವುದೋ, ಎಡಿಪಿ ಮತ್ತು ಇಡಿಪಿ ಅಡಿಯಲ್ಲಿ ಪಡೆಯುವ ಪದವಿಯನ್ನೂ ಅದೇ ರೀತಿ ಪರಿಗಣಿಸಲಾಗುವುದು. ಈ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಉನ್ನತ ಶಿಕ್ಷಣ ಸಂಸ್ಥೆಗಳು ಸಮಿತಿಗಳನ್ನು ಸ್ಥಾಪಿಸಲಿವೆ' ಎಂದು ಮಾಹಿತಿ ನೀಡಿದರು.
ಎಸ್‌ಒಪಿಯಲ್ಲಿ ಏನಿದೆ?
* ಕಾಲೇಜುಗಳು ತನಗೆ ಮಂಜೂರಾಗಿರುವ ಒಟ್ಟು ಸೀಟುಗಳಲ್ಲಿ ಶೇ10 ರಷ್ಟನ್ನು ಎಡಿಪಿಗಾಗಿ ಮೀಸಲಿಡಬಹುದು
* ಎಡಿಪಿಯ ಪಠ್ಯಕ್ರಮ ಮತ್ತು ಸಾಮಾನ್ಯ ಪದವಿಯ ಪಠ್ಯಕ್ರಮ ಒಂದೇ ಆಗಿರುತ್ತವೆ. ಒಟ್ಟು ಅಂಕಗಳೂ ಸಮಾನವಾಗಿರುತ್ತವೆ. ವ್ಯಾಸಂಗದ ಅವಧಿ ಮಾತ್ರ ಹೆಚ್ಚುಕಡಿಮೆ ಇರುತ್ತವೆ
. * ವಿದ್ಯಾರ್ಥಿಗಳು ಮೊದಲ ಸೆಮಿಸ್ಟರ್ ಅಥವಾ ಎರಡನೇ ಸೆಮಿಸ್ಟರ್‌ನ ಕೊನೆಯಲ್ಲಿ ಎಡಿಪಿಯನ್ನು ಆಯ್ಕೆ ಮಾಡುವ ಅವಕಾಶ ಹೊಂದಿರುವರು. ಆ ಬಳಿಕ ಅವಕಾಶವಿಲ್ಲ.
* ಇಡಿಪಿಯಲ್ಲಿ ಮೂರು ವರ್ಷ ಅಥವಾ ನಾಲ್ಕು ವರ್ಷಗಳ ಪದವಿ ಕೋರ್ಸ್ ಅವಧಿಯನ್ನು ಗರಿಷ್ಠ ಎರಡು ಸೆಮಿಸ್ಟರ್‌ಗಳವರೆಗೆ ವಿಸ್ತರಿಸಬಹುದು.