ನವದೆಹಲಿ: ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ವರ್ಷಗಳ ಕಾಲ ಬಾಕಿ ಇರಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ದಾಖಲಿಸಿರುವ ಸುಪ್ರೀಂ ಕೋರ್ಟ್, ಇಂತಹ ಅರ್ಜಿಗಳನ್ನು ಇತ್ಯರ್ಥಪಡಿಸುವಲ್ಲಿ ಒಂದು ದಿನ ವಿಳಂಬವಾದರೂ ಅದು ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂದು ಹೇಳಿದೆ.

ವೈಯಕ್ತಿಕ ಸ್ವಾತಂತ್ರ್ಯದ ಮಹತ್ವವನ್ನು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಹೇಳುತ್ತ ಬಂದಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠವು ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಹೇಳಿದೆ.
'ಜಾಮೀನು ಅರ್ಜಿಗಳನ್ನು ವರ್ಷಗಳ ಕಾಲ ಹಾಗೇ ಇರಿಸಿಕೊಳ್ಳುವುದನ್ನು ನಾವು ಮೆಚ್ಚುವುದಿಲ್ಲ' ಎಂದು ಪೀಠವು ಎಚ್ಚರಿಸಿದೆ.
ತಾನು ಸಲ್ಲಿಸಿರುವ ಜಾಮೀನು ಅರ್ಜಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಳೆದ ವರ್ಷದ ಆಗಸ್ಟ್‌ನಿಂದಲೂ ಬಾಕಿ ಇದೆ. ಆ ಅರ್ಜಿಯ ವಿಚಾರವಾಗಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ದೂರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಮಾತು ಹೇಳಿದೆ.
ಜಾಮೀನು ಅರ್ಜಿಯ ವಿಚಾರವಾಗಿ ವಾದ ಆಲಿಸದೆ, ವಿಚಾರಣೆಯನ್ನು ಪದೇ ಪದೇ ಮುಂದಕ್ಕೆ ಹಾಕಲಾಗಿತ್ತು ಎಂದು ಅರ್ಜಿದಾರರು ದೂರಿದ್ದರು. ಈ ಅರ್ಜಿಯು ನವೆಂಬರ್ 11ರಂದು ವಿಚಾರಣೆಗೆ ನಿಗದಿಯಾಗಿದ್ದು, ಎರಡು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪೀಠವು ಸೂಚಿಸಿದೆ.