ಕೊಟ್ಟಾಯಂ: ಉದ್ಯೋಗದ ಸ್ಥಳಗಳಲ್ಲಿ ಎದುರಿಸುವ ಮಾನಸಿಕ ಒತ್ತಡಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ನಿರ್ದೇಶನಗಳನ್ನು ಸಲ್ಲಿಸಲಾಗುವುದೆಂದು ಯುವ ಆಯೋಗದ ಅಧ್ಯಕ್ಷ ಎಂ.ಶಾಜರ್ ತಿಳಿಸಿದ್ದಾರೆ.
ಅವರು ಕೊಟ್ಟಾಯಂನ ಜಿಲ್ಲಾ ಯುವ ಆಯೋಗದ ಸಭಾಂಗಣದಲ್ಲಿ ನಿನ್ನೆ ಮಾತನಾಡಿದರು. ಈ ಅಧ್ಯಯನವು ಯುವಕರು ಕೆಲಸ ಮಾಡುವ ಕ್ಷೇತ್ರಗಳಾದ ಐಟಿ ಮತ್ತು ಜವಳಿ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿರುತ್ತದೆ. 2025ರ ಮಾರ್ಚ್-ಏಪ್ರಿಲ್ ವೇಳೆಗೆ ಅಧ್ಯಯನ ಪೂರ್ಣಗೊಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಳೆದ ವರ್ಷ ಯುವಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಕುರಿತು ಯುವ ಆಯೋಗದ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿತ್ತು. 14 ಜಿಲ್ಲೆಗಳಲ್ಲಿ ಸುಮಾರು ಇನ್ನೂರು ಮಂದಿ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ನಡೆಸಿದ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.
ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಯುವಕರಿಗೆ ಯುವ ಆಯೋಗದ ಸೇವೆಗಳು ದೂರವಾಣಿ ಕರೆ ದೂರದಲ್ಲಿ ಲಭ್ಯವಿದೆ. ಆಯೋಗದ ಕಾರ್ಯಚಟುವಟಿಕೆಗಳ ಬಗ್ಗೆ ಯುವಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪೊಸ್ಟರ್‍ಗಳನ್ನು ಹಾಕಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಯೋಗದ ಮುಂದೆ ಬರುವ ದೂರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.