ನವದೆಹಲಿ: ದೇಶದಾದ್ಯಂತ ಎಲ್ಲ ಮದ್ಯ ಮಾರಾಟ ಕೇಂದ್ರಗಳಲ್ಲಿ ಖರೀದಿದಾರರ ವಯಸ್ಸಿನ ಕಡ್ಡಾಯ ಪರಿಶೀಲನೆಗೆ ದೃಢವಾದ ನೀತಿಯನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಮದ್ಯ ಕುಡಿದು ಚಾಲನೆ ಮಾಡು ತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದು ಕೊಳ್ಳಲು ಮತ್ತು ಈ ರೀತಿಯ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ದೇಶದಾದ್ಯಂತ ಏಕರೂಪ ಮದ್ಯ ನಿಯಮ ರೂಪಿಸುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ದೆಹಲಿ ಮೂಲದ ಸರ್ಕಾರೇತರ ಸಂಘಟನೆ 'ಕಮ್ಯುನಿಟಿ ಎಗೆನೆಸ್ಟ್ ಡ್ರಂಕನ್ ಡ್ರೈವಿಂಗ್' (ಸಿಎಡಿಡಿ) ಈ ಪಿಐಎಲ್ ಸಲ್ಲಿಸಿದೆ. ಮದ್ಯ ಕುಡಿತ ಸಂಬಂಧಿ ಅವಘಡಗಳ ತಡೆಗೆ ಸಂಬಂಧಿಸಿದಂತೆ ಈ ಸಂಘಟನೆ 23 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿಶ್ವನಾಥನ್ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.