ನವದೆಹಲಿ: ಉಭಯ ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ವಿಚಾರದಲ್ಲಿ ಭಾರತ ಮತ್ತು ಕೆನಡಾ ಪರಸ್ಪರ ಸಂಪರ್ಕದಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸತ್ತಿಗೆ ತಿಳಿಸಿದೆ.
'ಎರಡೂ ಸರ್ಕಾರಗಳು ತಮ್ಮ ದ್ವಿಪಕ್ಷೀಯ ಬಾಂಧವ್ಯದ ವಿಚಾರದಲ್ಲಿ ಸಂಪರ್ಕದಲ್ಲಿವೆ.
ಆದರೂ, ಸ್ಥಿರವಾದ ದ್ವಿಪಕ್ಷೀಯ ಸಂಬಂಧಕ್ಕಾಗಿ ಪರಸ್ಪರರ ಕಾಳಜಿ, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ ನೀಡುವುದು ಅಗತ್ಯ' ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಗುರುವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ-ಕೆನಡಾ ನಡುವೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿತ್ತು. ಎರಡೂ ಕಡೆಯವರು ಪರಸ್ಪರ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರ ತೆಗೆದುಕೊಂಡಿದ್ದರು.