ದಿಂಡೋರಿ: ಮಧ್ಯಪ್ರದೇಶದ ದಿಂಡೋರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮೃತಪಟ್ಟ ವ್ಯಕ್ತಿಯ ರಕ್ತದ ಕಲೆಗಳನ್ನು ಆತನ ಗರ್ಭಿಣಿ ಪತ್ನಿಯಿಂದಲೇ ಸ್ವಚ್ಛಗೊಳಿಸಿರುವ ಪ್ರಕರಣ ವರದಿಯಾಗಿದೆ.
ದಿಂಡೋರಿ: ಮಧ್ಯಪ್ರದೇಶದ ದಿಂಡೋರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮೃತಪಟ್ಟ ವ್ಯಕ್ತಿಯ ರಕ್ತದ ಕಲೆಗಳನ್ನು ಆತನ ಗರ್ಭಿಣಿ ಪತ್ನಿಯಿಂದಲೇ ಸ್ವಚ್ಛಗೊಳಿಸಿರುವ ಪ್ರಕರಣ ವರದಿಯಾಗಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಂದ ಹಲ್ಲೆಗೊಳಗಾದ ರಘುರಾಜ್ ಮಾರವಿ (28) ಅವರನ್ನು ಗುರುವಾರ ರಾತ್ರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು.
'ರಘುರಾಜ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದರು. ಆತನಿಗೆ ನೀಡಲಾಗಿದ್ದ ಹಾಸಿಗೆ ಮೇಲೆ ರಕ್ತದ ಕಲೆಗಳು ಅಂಟಿಕೊಂಡಿತ್ತು. ಅದನ್ನು ಆಸ್ಪತ್ರೆ ಸಿಬ್ಬಂದಿ ಮೃತ ವ್ಯಕ್ತಿಯ ಪತ್ನಿ, ಐದು ತಿಂಗಳ ಗರ್ಭಿಣಿ ರೋಶನಿ ಬಾಯಿ ಅವರಿಂದಲೇ ಸ್ವಚ್ಛಗೊಳಿಸಿದ್ದಾರೆ. ಘಟನೆ ಸಂಬಂಧ ನರ್ಸಿಂಗ್ ಅಧಿಕಾರಿ ರಾಕುಮಾರಿ ಮಾರ್ಕಮ್ ಮತ್ತು ಸಹಾಯಕ ಚೋಟ್ಟಿ ಬಾಯಿ ಠಾಕೂರ್ ಅವರನ್ನು ಅಮಾನತುಗೊಳಿಸಿದ್ದೇವೆ. ಜತೆಗೆ, ಡಾ.ಚಂದ್ರಶೇಖರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ರಘುರಾಜ್ ಅವರ ಸಹೋದರ ಶಿವರಾಜ್ ಮರಾವಿ (40) ಮತ್ತು ತಂದೆ ಧರ್ಮಸಿಂಗ್ ಮರಾವಿ (65) ಕೂಡ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಸಹೋದರ ರಾಮರಾಜ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಲಾಲ್‌ಪುರ ಗ್ರಾಮದಲ್ಲಿ ಬೆಳೆ ಕಟಾವು ಮಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.