ಕಾಸರಗೋಡು: ಕೇರಳ ಹಾಗೂ ಕರ್ನಾಟಕದಲ್ಲಿ ಪ್ರಸಿದ್ಧಿಗೆ ಕಾರಣವಾಗಿರುವ ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾಸರಗೋಡಿನಿಂದ ಸಂಚರಿಸುವ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ.
(ಮಧೂರು ರಸ್ತೆಯ ಚೂರಿ ಪ್ರದೇಶದಲ್ಲಿ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ)ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡಿನಿಂದ ಮಧೂರು ಕ್ಷೇತ್ರಕ್ಕೆ ಸುಮಾರು ಆರು ಕಿ.ಮೀ ದೂರವಿದ್ದು, ಸೂರ್ಲು, ಚೂರಿ, ರಾಮದಾಸನಗರ ಮುಂತಾದೆಡೆ ರಸ್ತೆ ಹೊಂಡಬಿದ್ದಿದೆ. ಕೆಲವೆಡೆ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ವ್ಯಾಪಾರಿ ಸಂಸ್ಥೆಗಳು ರಸ್ತೆ ಅಂಚಿಗೇ ಕಾರ್ಯಾಚರಿಸುತ್ತಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಇನ್ನು ವಿದ್ಯುತ್ ಕಂಬಗಳು ರಸ್ತೆ ಅಂಚಿಗೇ ಅಳವಡಿಸಿರುವುದರಿಂದ ವಾಹನ ಸಂಚಾರಕ್ಕೆ ಮತ್ತಷ್ಟು ಅಡಚಣೆಯುಂಟಾಗುತ್ತಿದೆ. ಕೆಲವೊಮ್ಮೆ ಖಾಸಗಿ ಬಸ್‍ಗಳು ಪ್ರಯಾಣಿಕರಿಂದ ತುಂಬಿಕೊಂಡು ಸಾಗುವ ಮಧ್ಯೆ, ರಸ್ತೆಅಂಚಿಗಿರುವ ವಿದ್ಯುತ್ ಕಂಬಗಳಿಂದ ಜೀವಾಪಾಯಕ್ಕೂ ಕಾರಣವಾಗುತ್ತಿದೆ. ಕರಂದಕ್ಕಾಡಿನಲ್ಲಿ ಇತ್ತೀಚೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿಯೊಬ್ಬನ ತಲೆ ರಸ್ತೆ ಅಂಚಿಗಿರುವ ವಿದ್ಯುತ್ ಕಂಬಕ್ಕೆ ಬಡಿದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿತ್ತು. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಈ ರಸ್ತೆ ನಿರ್ವಹಣೆ ಕೊರತೋಟೋ ಇದೆ: ಕೆಎಸÉಯಿಂದ ಪ್ರತಿ ವರ್ಷ ಹಾಳಾಗುತ್ತಿದೆ. ರಾಜ್ಯದಲ್ಲಿ ಗುರುತಿಸಲ್ಪಟ್ಟಿರುವ ಮಧೂರು ದೇಗುಲಕ್ಕೆ ಸಂಚರಿಸುವ ಪ್ರಸಕ್ತ ರಸ್ತೆಯ ಶೋಚನೀಯಾವಸ್ಥೆ ಬಗ್ಗೆ ಭಕ್ತಾದಿಗಳೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
(ಕಾಸರಗೋಡು-ಮಧೂರು ರಸ್ತೆಯ ಸೂರ್ಲು ಪ್ರದೇಶದಲ್ಲಿ ಇಕ್ಕಟ್ಟಾದ ರಸ್ತೆ ಹಾಗೂ ರಸ್ತೆ ಅಂಚಿಗೇ ಅಲವಡಿಸಿರುವ ವಿದ್ಯುತ್ ಕಂಬದಿಂದ ಅಪಾಯ ಹೆಚ್ಚಾಗಿದೆ.)ರಸ್ತೆ ಅಭಿವೃದ್ಧಿಗೆ ಆಗ್ರಹ:
ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆ ಮಾ 27ರಿಂದ ಏ. 7ರ ವರೆಗೆ ನಡೆಯಲಿದ್ದು ಈ ಮಹೋತ್ಸವಕ್ಕೂ ಮೊದಲು ರಸ್ತೆ ಅಭಿವೃದ್ಧಿಕಾರ್ಯ ಪೂರ್ತಿಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಹಲವು ವರ್ಷಗಳ ನಂತರ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಬಂದು ಸೇರುವ ನಿರೀಕ್ಷೆಯಿದ್ದು, ದೇವಾಲಯಕ್ಕೆ ಸಂಚರಿಸುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯ ಶೋಚನೀಯಾವಸ್ಥೆ ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಸೀಮೆಯ ಪ್ರಮುಖ ದೇವಾಲಯ ಮಧೂರಿನ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎದ್ದುಕಾಣುತ್ತಿದೆ. ಮುಜರಾಯಿ ಇಲಾಖೆ ಅಧೀನದಲ್ಲಿದ್ದರೂ, ಇಲ್ಲಿಗೆ ಆಗಮಿಸುವ ರಸ್ತೆ ಇಕ್ಕಟ್ಟಾಗಿದೆ. ಸೂಕ್ತ ಬಸ್ ತಂಗುದಾಣದ ವ್ಯವಸ್ಥೆ ಇಲ್ಲಿಲ್ಲ. ಕಾಸರಗೋಡಿನಿಂದ ಸುಮಾರು ಆರು ಕಿ.ಮೀ ದೂರವಿರುವ ಮಧೂರು-ಕಾಸರಗೋಡು ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸುವಂತೆ ನಾಗರಿಕರು ಹಾಗೂ ಭಕ್ತಾದಿಗಳು ಆಗ್ರಹಿಸುತ್ತಾ ಬಂದಿದ್ದರೂ, ಸರ್ಕಾರ ಮನವಿ ಆಲಿಸಲೇ ಇಲ್ಲ.
(ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ)