ಶ್ರೀನಗರ: ಜಮ್ಮು ವಲಯದಲ್ಲಿ ಗುಡ್ಡ ಪ್ರದೇಶ ವ್ಯಾಪ್ತಿಯ ಕಿಶ್ತವಾಡ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಗುರುವಾರ ತಾವು ಅಪಹರಣ ಮಾಡಿದ್ದ ಇಬ್ಬರು ಗ್ರಾಮ ರಕ್ಷಣಾ ಸಮೂಹದ ಸದಸ್ಯರನ್ನು (ವಿಡಿಜಿ) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಶ್ರೀನಗರ: ಜಮ್ಮು ವಲಯದಲ್ಲಿ ಗುಡ್ಡ ಪ್ರದೇಶ ವ್ಯಾಪ್ತಿಯ ಕಿಶ್ತವಾಡ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಗುರುವಾರ ತಾವು ಅಪಹರಣ ಮಾಡಿದ್ದ ಇಬ್ಬರು ಗ್ರಾಮ ರಕ್ಷಣಾ ಸಮೂಹದ ಸದಸ್ಯರನ್ನು (ವಿಡಿಜಿ) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಉಗ್ರರ ಗುಂಡಿಗೆ ಬಲಿಯಾದವರನ್ನು ನಾಜಿರ್ ಅಹಮ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಶವಗಳನ್ನು ಪತ್ತೆ ಮಾಡಲಾಯಿತು. ಇಲ್ಲಿ ಸಕ್ರಿಯವಾಗಿರುವ ಉಗ್ರಗಾಮಿಗಳ ನೆಲೆ ಪತ್ತೆಗೆ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ 'ರೈಸಿಂಗ್ ಕಾಶ್ಮೀರ್' ದೈನಿಕ ವರದಿ ಮಾಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಜೊತೆಗೆ ಗುರುತಿಸಿಕೊಂಡಿರುವ ಕಾಶ್ಮೀರಿ ಟೈಗರ್ಸ್ ಸಂಘಟನೆಯು ಈ ಇಬ್ಬರು ವಿಡಿಜಿಗಳ ಹತ್ಯೆ ಹೊಣೆಯನ್ನು ಹೊತ್ತುಕೊಂಡಿದೆ.
ಉಗ್ರಗಾಮಿಗಳ ದಾಳಿಗೆ ಪ್ರತಿರೋಧವನ್ನು ಒಡ್ಡಲು ಗ್ರಾಮ ರಕ್ಷಣಾ ಸಮೂಹಗಳನ್ನು 1990ರ ದಶಕದಲ್ಲಿ ರಚಿಸಲಾಗಿತ್ತು. ಉಗ್ರಗಾಮಿಗಳ ಚಟುವಟಿಕೆ ತೀವ್ರಗೊಂಡಿದ್ದ ಆ ಅವಧಿಯಲ್ಲಿ ಜಮ್ಮುವಿನ ಚೆನಾಬ್ ಕಣಿವೆ, ಪಿರ್ ಪಂಜಾಲ್ ವಲಯ ಹಾಗೂ ಗುಡ್ಡಗಾಡು ಪ್ರದೇಶವಾದ ಉಧಂಪುರ್, ಕಠುವಾ ಜಿಲ್ಲೆಗಳಲ್ಲಿ ಈ ಸಮೂಹಗಳು ಸಕ್ರಿಯವಾಗಿದ್ದವು. ಭದ್ರತಾ ಪಡೆಗಳ ಕಾರ್ಯಾಚರಣೆಗೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿದ್ದವು. ಗ್ರಾಮ ರಕ್ಷಣಾ ಸಮೂಹದ ಸದಸ್ಯರಿಗೆ ಶಸ್ತಾಸ್ರ್ರ ಬಳಕೆ ಹಾಗೂ ಗುಪ್ತ ಮಾಹಿತಿ ಕಲೆಹಾಕುವ ಕುರಿತು ಭಾರತೀಯ ಸೇನೆಯು ತರಬೇತಿ ಶಿಬಿರಗಳನ್ನು ಆಯೋಜಿಸಿತ್ತು.