ಪ್ರಯಾಗರಾಜ್: ಪರೀಕ್ಷಾ ಆಕಾಂಕ್ಷಿಗಳ ಪ್ರತಿಭಟನೆ ಬೆನ್ನಲ್ಲೇ, ಅವರ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿರುವ ಉತ್ತರ ಪ್ರದೇಶ ಲೋಕಸೇವಾ ಆಯೋಗವು (ಯುಪಿಪಿಎಸ್‌ಸಿ) ಪರಿಶೀಲನಾ ಅಧಿಕಾರಿ (ಆರ್‌ಒ) ಮತ್ತು ಸಹಾಯಕ ಪರಿಶೀಲನಾ ಅಧಿಕಾರಿ (ಎಆರ್‌ಒ) ಪರೀಕ್ಷೆಗಳನ್ನು ಗುರುವಾರ ಮುಂದೂಡಿದೆ.

ಆರ್‌ಒ ಮತ್ತು ಎಆರ್‌ಒ ಪರೀಕ್ಷೆಗಳಲ್ಲಿ ಮುಕ್ತ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಆ ಸಮಿತಿಯು ಎಲ್ಲಾ ಆಯಾಮಗಳಲ್ಲಿ ಅಧ್ಯಯನ ನಡೆಸಿ ವಿಸ್ತೃತ ವರದಿಯನ್ನು ಸಲ್ಲಿಸಲಿದೆ ಎಂದೂ ಆಯೋಗ ಪ್ರಕಟಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆ ಮೇರೆಗೆ ಯುಪಿಪಿಎಸ್‌ಸಿ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ ಎಂದು ಆಯೋಗದ ಕಾರ್ಯದರ್ಶಿ ಅಶೋಕ್ ಕುಮಾರ್ ತಿಳಿಸಿದರು.
ಆರ್‌ಒ-ಎಆರ್‌ಒ ಪರೀಕ್ಷೆಯನ್ನು ಡಿಸೆಂಬರ್ 22 ಮತ್ತು 23ರಂದು ಮೂರು ಪಾಳಿಗಳಲ್ಲಿ ಹಾಗೂ ಪಿಸಿಎಸ್ ಪೂರ್ವಭಾವಿ ಪರೀಕ್ಷೆಯನ್ನು ಡಿಸೆಂಬರ್ 7 ಮತ್ತು 8ರಂದು ಎರಡು ಪಾಳಿಗಳಲ್ಲಿ ನಡೆಸುವುದಾಗಿ ಆಯೋಗ ಈ ಹಿಂದೆ ಪ್ರಕಟಿಸಿತ್ತು. ಇದಕ್ಕೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಭಾರಿ ಸಂಖ್ಯೆಯಲ್ಲಿ ಪರೀಕ್ಷಾ ಆಕಾಂಕ್ಷಿಗಳು ಇತ್ತೀಚೆಗೆ ಆಯೋಗದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟಿದ್ದರು.