ನವದೆಹಲಿ: 'ನಮ್ಮ ದೇಶದಲ್ಲಿ ಅಜ್ಮಲ್ ಕಸಬ್‌ನಂತಹ ಉಗ್ರನಿಗೂ ನ್ಯಾಯಯುತ ವಿಚಾರಣೆ ಎದುರಿಸುವ ಅವಕಾಶ ನೀಡಲಾಗಿದೆ' ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ಮುಫ್ತಿ ಮಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅಪಹರಣ ಪ್ರಕರಣದ ಆರೋಪಿ, ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ತನ್ನ ಮುಂದೆ ಹಾಜರುಪಡಿಸುವಂತೆ ಜಮ್ಮು ಮತ್ತು ಕಾಶ್ಮೀರದ ವಿಚಾರಣಾ ನ್ಯಾಯಾಲಯ 2022ರ ಸೆಪ್ಟೆಂಬರ್ 20ರಂದು ಸಿಬಿಐಗೆ ನಿರ್ದೇಶಿಸಿತ್ತು.
ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ಈ ಹೇಳಿಕೆ ನೀಡಿದೆ. ಯಾಸಿನ್ ಮಲಿಕ್‌ನ ವಿಚಾರಣೆಗೆ ತಿಹಾರ್ ಜೈಲಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸೂಚನೆಯನ್ನೂ ಸುಪ್ರೀಂ ಕೋರ್ಟ್ ನೀಡಿದೆ.
ಸಿಬಿಐ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಭದ್ರತೆಯ ಕಾರಣಗಳಿಂದ ಮಲಿಕ್ ಅವರನ್ನು ವಿಚಾರಣೆಗಾಗಿ ಜಮ್ಮುವಿಗೆ ಕರೆದೊಯ್ಯಲು ಸಾಧ್ಯವಿಲ್ಲ. ಪಾಟಿ ಸವಾಲು ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಬೇಕೆಂದು ಮನವಿ ಮಾಡಿದರು.
ಅದಕ್ಕೆ ಪೀಠ, 'ಪಾಟಿ ಸವಾಲು ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಸುವುದಾದರೂ ಹೇಗೆ? ಅಜ್ಮಲ್ ಕಸಬ್ ಕೂಡಾ ನ್ಯಾಯಯುತ ವಿಚಾರಣೆ ಎದುರಿಸಿದ್ದ. ಹೈಕೋರ್ಟ್‌ನಲ್ಲಿ ವಿಚಾರಣೆ ಸಂದರ್ಭ ಕಾನೂನು ನೆರವು ನೀಡಲಾಗಿತ್ತು' ಎಂದಿತು.
2008ರಲ್ಲಿ ಮುಂಬೈ ದಾಳಿ ವೇಳೆ ಸೆರೆಸಿಕ್ಕ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಯರವಾಡ ಕೇಂದ್ರ ಕಾರಾಗೃಹದಲ್ಲಿ ಮರಣ ದಂಡನೆಗೆ ಗುರಿಪಡಿಸಲಾಗಿತ್ತು.
'ಜೈಲಿನ ಆವರಣದಲ್ಲೇ ಮಲಿಕ್ ಅವರ ವಿಚಾರಣೆ ನಡೆಸಲು ನಾವು ಆದೇಶಿಸಬಹುದು ಮತ್ತು ಅದಕ್ಕಾಗಿ ನವದೆಹಲಿಗೆ ಬರುವಂತೆ ನ್ಯಾಯಾಧೀಶರಿಗೆ ಸೂಚಿಸಲೂಬಹುದು' ಎಂದು ಪೀಠ ಹೇಳಿತು.
ಆದರೆ, ಅಂತಹ ಆದೇಶ ಹೊರಡಿಸುವ ಮುನ್ನ ಈ ಪ್ರಕರಣದ ಎಲ್ಲ ಆರೋಪಿಗಳ ವಿಚಾರಣೆ ನಡೆಸಬೇಕು ಎಂದಿತು. ಸುಪ್ರೀಂ ಕೋರ್ಟ್‌ನ ವಿಚಾರಣೆಯಲ್ಲಿ ಹಾಜರಾಗಲು ಮಲಿಕ್‌ಗೆ ಅವಕಾಶ ನೀಡಬಹುದು ಎಂದು ಪೀಠ, ಮುಂದಿನ ವಿಚಾರಣೆಯನ್ನು ನವೆಂಬರ್ 28ಕ್ಕೆ ನಿಗದಿಪಡಿಸಿದೆ.