ಮಂಜೇಶ್ವರ: ತೆಂಕಣ ಯಕ್ಷಗಾನದ ತವರೂರು ಕಾಸರಗೋಡು ಜಿಲ್ಲೆಯ ಕಲಾವಿದರನ್ನು ಒಂದೆಡೆ ಸಮ್ಮೇಳಿಸಿ, ನೆಲಮೂಲದ ಕಲಾ ಸಂಸ್ಕøತಿಗೆ ಅಮೂಲ್ಯ ಕೊಡುಗೆಯಿತ್ತ ಹಿರಿಯ ಯಕ್ಷಗಾನ ಕಲಾವಿದರನ್ನು ಕೇರಳ ತುಳು ಅಕಾಡೆಮಿಯ ಗೌರವ ಪುರಸ್ಕಾರವನ್ನಿತ್ತು ಸನ್ಮಾನಿಸಲು ಕೇರಳ ತುಳು ಅಕಾಡೆಮಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ತುಳು ಅಕಾಡೆಮಿಯ ಹೊಸಂಗಡಿಯ ಕೇಂದ್ರ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಅಧ್ಯಕ್ಷ ಕೆ. ಆರ್. ಜಯಾನಂದ ಅವರ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ತಾಲೂಕಿನಲ್ಲಿ ಯಕ್ಷಗಾನಕ್ಕೆ ಕೊಡುಗೆಯಿತ್ತ ವರ್ತಮಾನದ ಹಿರಿಯರ ಕುರಿತು ಸಮಾಲೋಚನೆ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ನಮ್ಮ ತುಳುನಾಡ ನೆಲಮೂಲದ ಯಕ್ಷಗಾನಕ್ಕಾಗಿ ಬದುಕನ್ನು ತ್ಯಾಗಗೈದು ಕಲೆಯನ್ನು ಪೋಷಿಸಿ ಬೆಳೆಸಿದ ಮಹನೀಯರೆಲ್ಲರೂ ನಮ್ಮ ನೆಲದ ಅಭಿಮಾನ ಮಾನಧನರು. ಅವರನ್ನು ಗೌರವಿಸುವುದೆಂದರೆ ನಮ್ಮನ್ನು ನಾವೇ ಗೌರವಿಸಿದಂತೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ 25 ಆಯ್ದ ಹಿರಿಯ ಕಲಾವಿದರನ್ನು ಗೌರವೋಪಚಾರ ಸಹಿತ ಅಕಾಡೆಮಿ ವತಿಯಿಂದ ಸನ್ಮಾನಿಸುವುದು ಉದ್ದೇಶ. ನವಂಬರ್ 24ರಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಲಾವಿದರಿಗೆ ಸನ್ಮಾನ ಸಹಿತ ಕಾಸರಗೋಡಿನ ಕಲಾವಿದರಿಂದಲೇ ಬಯಲಾಟ ಏರ್ಪಡಿಸಿ ಅಕಾಡೆಮಿಯ ಕಲಾ ಗೌರವ ನೀಡಲಾಗುವುದು. ಪ್ರಸ್ತುತ ಕಾರ್ಯಕ್ರಮಕ್ಕೆ ಕೇರಳದ ಸಚಿವರ ಸಹಿತ ಸರ್ಕಾರದ ಪ್ರತಿನಿಧಿಗಳನ್ನು ಪಾಲ್ಗೊಳ್ಳಿಸುವಂತೆ ಯೋಚಿಸಲಾಗಿದೆ ಎಂದರು.
ಕಾಸರಗೋಡಿನ ಹಿರಿಯ ಯಕ್ಷಗಾನ ಕಲಾವಿದರ ಸನ್ಮಾನ ಗೌರವ ಸಮಾಲೋಚನಾ ಸಭೆಯಲ್ಲಿ ಕಲಾಚಿಂತಕ, ಪತ್ರಕರ್ತ ಎಂ. ನಾ. ಚಂಬಲ್ತಿಮಾರ್, ಪ್ರಸಂಗಕರ್ತ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ರಾಜಾರಾಂ ಮಾಸ್ತರ್ ಮೀಯಪದವು, ಬಾಲಕೃಷ್ಣ ಮಾಸ್ತರ್, ಭಾಗವತ ಶುಭಾನಂದ ಶೆಟ್ಟಿ, ಕಲಾವಿದ ಬೆಜ್ಜಂಗಳ ನಾರಾಯಣ ಪೂಜಾರಿ, ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಗೋಪಾಲ ಕೆ.ಎನ್, ಶಂಕರ ನಾರಾಯಣ ಭಟ್ ಮೊದಲಾದವರು ಸಲಹೆ ಸೂಚನೆಗಳನ್ನಿತ್ತರು.
ತುಳು ಅಕಾಡೆಮಿಯ ಪ್ರದೀಪ್ ಕುಮಾರ್ ಸ್ವಾಗತಿಸಿ, ಕೃಷ್ಣವೇಣಿ ಟೀಚರ್ ವಂದಿಸಿದರು.
ಕೇರಳದಲ್ಲಿ ತುಳು ಅಕಾಡೆಮಿ ಅಸ್ತಿತ್ವಕ್ಕೆ ಬಂದ ಬಳಿಕ ತುಳುನಾಡಿನ ಕಲೆ, ಕಲಾವಿದರನ್ನು ಗೌರವಿಸಲು ಹೊರಟದ್ದು ಇದೇ ಮೊದಲು. ಈ ಮೂಲಕ ಗಡಿನಾಡಿನ ನೆಲಮೂಲದ ಸಂಸ್ಕೃತಿಯ ನಡೆ -ನುಡಿಗೆ ಗೌರವ ನೀಡಲು ಅಕಾಡೆಮಿ ಮುಂದಾಗಿದೆ.