HEALTH TIPS

ಅದಾನಿ ಲಂಚ ಹಗರಣ | ಪಟ್ಟು ಸಡಿಲಿಸದ ವಿಪಕ್ಷ: ನಡೆಯದ ಕಲಾಪ

ನವದೆಹಲಿ: ಮಣಿಪುರ ಗಲಭೆ, ಸಂಭಲ್ ಹಿಂಸಾಚಾರ ಪ್ರಕರಣ ಮತ್ತು ಉದ್ಯಮಿ ಗೌತಮ್‌ ಅದಾನಿ ಲಂಚ ಹಗರಣದ ಬಗ್ಗೆ ಚರ್ಚೆ ನಡೆಸಬೇಕೆಂಬ ಬಿಗಿಪಟ್ಟನ್ನು 'ಇಂಡಿಯಾ' ಮೈತ್ರಿಕೂಟದ ಸಂಸದರು ಸಡಿಲಿಸದ ಕಾರಣ ಶುಕ್ರವಾರವೂ ಸಂಸತ್‌ ಕಲಾಪ ನಡೆಯಲಿಲ್ಲ. 

ಚಳಿಗಾಲದ ಅಧಿವೇಶನದ ಮೊದಲ ವಾರದಲ್ಲಿ ಲೋಕಸಭೆಯು 54 ನಿಮಿಷಗಳು ಹಾಗೂ ರಾಜ್ಯಸಭೆಯು 75 ನಿಮಿಷಗಳಷ್ಟೇ ಕಾರ್ಯನಿರ್ವಹಿಸಿವೆ.

ನಾಲ್ಕನೇ ದಿನವಾದ ಶುಕ್ರವಾರ ಕೂಡಾ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ರಾಜ್ಯಸಭೆಯಲ್ಲಿಯೂ ವಿರೋಧ ಪಕ್ಷದ ಸದಸ್ಯರ ಗದ್ದಲ ಮುಂದುವರಿಯಿತು.

ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು 'ಮೋದಾನಿ ವಿಷಯವು ಮತ್ತೊಂದು ದಿನದ ಕಲಾಪವನ್ನು ನುಂಗಿದೆ' ಎಂದು ಹೇಳಿದರು.

'ಕಲಾಪ ಮುಂದೂಡದ ಹಾಗೆ ನೋಡಿಕೊಳ್ಳಲು ಸರ್ಕಾರ ಏಕೆ ಪ್ರಯತ್ನಿಸುತ್ತಿಲ್ಲ ಎಂಬುದು ನಿಗೂಢವಾಗಿಯೇ ಉಳಿದಿದೆ. ಮಣಿಪುರ, ಸಂಭಲ್‌ ಮತ್ತು ಅದಾನಿ ವಿಷಯದಲ್ಲಿ ವಿರೋಧ ಪಕ್ಷಗಳು ಇನ್ನಷ್ಟು ಗದ್ದಲ ಉಂಟುಮಾಡುವುದಕ್ಕೆ ಸರ್ಕಾರವೇ ಅನುವು ಮಾಡಿಕೊಡುತ್ತಿದೆ' ಎಂದು ದೂರಿದ್ದಾರೆ.

ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಕಾರ್ಯಾವಧಿಯನ್ನು ವಿಸ್ತರಿಸುವ ನಿರ್ಣಯ ಅಂಗೀಕರಿಸಿದ್ದು ಮತ್ತು ಕೆಲವೊಂದು ಪ್ರಶ್ನೆಗಳನ್ನು ಪರಿಗಣಿಸಿದ್ದು ಬಿಟ್ಟರೆ ಲೋಕಸಭೆಯಲ್ಲಿ ಈ ವಾರ ಯಾವುದೇ ಕಲಾಪ ನಡೆಯಲಿಲ್ಲ.

ಲೋಕಸಭೆಯು ಸೋಮವಾರ ಆರು ನಿಮಿಷ, ಬುಧವಾರ ಮತ್ತು ಗುರುವಾರ ತಲಾ 14 ನಿಮಿಷ ಹಾಗೂ ಶುಕ್ರವಾರ 20 ನಿಮಿಷ ಮಾತ್ರ ಕಾರ್ಯನಿರ್ವಹಿಸಿದೆ. ರಾಜ್ಯಸಭೆಯು ಈ ನಾಲ್ಕು ದಿನಗಳಲ್ಲಿ ಕ್ರಮವಾಗಿ 33 ನಿಮಿಷ, 13 ನಿಮಿಷ, 16 ನಿಮಿಷ ಹಾಗೂ 13 ನಿಮಿಷ ಕಾರ್ಯನಿರ್ವಹಿಸಿದೆ.

ಶುಕ್ರವಾರ ಬೆಳಿಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಅದಾನಿ ವಿವಾದ ಮತ್ತು ಉತ್ತರ ಪ್ರದೇಶದ ಸಂಭಲ್‌ನಲ್ಲಿ ಈಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದರು. ಸ್ಪೀಕರ್‌ ಓಂ ಬಿರ್ಲಾ ಅವರು ಸುಗಮ ಕಲಾಪಕ್ಕೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರೂ, ವಿಪಕ್ಷಗಳು ಒಪ್ಪಲಿಲ್ಲ. ಇದರಿಂದ ಕಲಾಪವನ್ನು ಮಧ್ಯಾಹ್ನ 12ರವರೆಗೆ ಮುಂದೂಡಲಾಯಿತು.

ಸದನ ಮತ್ತೆ ಸೇರಿದಾಗ ಪ್ರತಿಪಕ್ಷಗಳ ಸಂಸದರು ಗದ್ದಲ ಮುಂದುವರಿಸಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ಬಿಜೆಪಿಯ ಸಂಸದ ದಿಲೀಪ್ ಸೈಕಿಯಾ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅದಾನಿ ಲಂಚ ಪ್ರಕರಣ, ಮಣಿಪುರ ಹಾಗೂ ಸಂಭಲ್‌ ಹಿಂಸಾಚಾರ ‍ಪ್ರಕರಣಗಳ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳ 17 ಸದಸ್ಯರು ನೀಡಿದ ನೋಟಿಸ್‌ಗಳನ್ನು ತಿರಸ್ಕರಿಸಿದ ಸಭಾಪತಿ ಜಗದೀಪ್‌ ಧನಕರ್, ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

'ಖಾಸಗಿ ಸಂಸ್ಥೆ- ಅಮೆರಿಕ ನ್ಯಾಯಾಂಗ ಇಲಾಖೆಯ ವಿಚಾರ'

ನವದೆಹಲಿ (ಪಿಟಿಐ): ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಹೊರಿಸಿರುವ ಲಂಚದ ಆರೋಪದ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಭಾರತ 'ಇದು ಖಾಸಗಿ ಸಂಸ್ಥೆಗಳು ಮತ್ತು ಕೆಲವು ವ್ಯಕ್ತಿಗಳು ಹಾಗೂ ಅಮೆರಿಕದ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ನ್ಯಾಯಿಕ ಸಂಗತಿ' ಎಂದು ಹೇಳಿದೆ.

'ಈ ವಿಷಯದ ಬಗ್ಗೆ ಅಮೆರಿಕವು ಭಾರತ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಿಲ್ಲ. ಇದೊಂದು ಕಾನೂನಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಕೆಲವೊಂದು ಸ್ಥಾಪಿತ ಕಾರ್ಯವಿಧಾನ ಮತ್ತು ನ್ಯಾಯಿಕ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ ಎಂದು ನಾವು ನಂಬಿದ್ದೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌ ಹೇಳಿದ್ದಾರೆ.

ಅದಾನಿ ಪ್ರಕರಣದಲ್ಲಿ ಅಮೆರಿಕವು ಯಾವುದೇ ಸಮನ್ಸ್‌ ಅಥವಾ ವಾರಂಟ್‌ ಜಾರಿಗೊಳಿಸಿದೆಯೇ ಎಂಬ ಪ್ರಶ್ನೆಗೆ 'ಭಾರತವು ಅಮೆರಿಕದಿಂದ ಅಂತಹ ಯಾವುದೇ ಮನವಿ ಸ್ವೀಕರಿಸಿಲ್ಲ' ಎಂದರು.

-ಜಗದೀಪ ಧನಕರ್, ರಾಜ್ಯಸಭೆಯ ಸಭಾಪತಿವಿರೋಧ ಪಕ್ಷಗಳ ಸದಸ್ಯರು 267ನೇ ನಿಯಮವನ್ನು ಕಲಾಪ ಮುಂದೂಡುವ ಮತ್ತು ಕಲಾಪಕ್ಕೆ ಅಡ್ಡಿಪಡಿಸುವ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries