ಮುಂಬೈ: ಗರೀಬಿ ಹಠಾವೊ ಘೋಷ ವಾಕ್ಯ ಮೊಳಗಿಸಿದ್ದ ಕಾಂಗ್ರೆಸ್ ಬಡವರನ್ನು ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಪನ್ವೆಲ್‌ನ ಲ್ಲಿ ಚುನಾವಣಾ ಪ್ರಚಾರದ ವೇಳೆ ದೂಷಿಸಿದ್ದಾರೆ.
ಬಡವರು ಅಭಿವೃದ್ಧಿ ಹೊಂದಬಾರದು ಎಂಬುದೇ ಕಾಂಗ್ರೆಸ್ ಮನಸ್ಥಿತಿ ಎಂದು ಹೇಳಿದ್ದಾರೆ.
'ವೋಟ್‌ಬ್ಯಾಂಕ್ ರಾಜಕೀಯದಲ್ಲಿ ಸದಾ ಮುಂದಿರುವ ಕಾಂಗ್ರೆಸ್, ಬಡವರ ವಿರೋಧಿಯಾಗಿದೆ. ಕಾಂಗ್ರೆಸ್ ಅನ್ನು ತಡೆಯುವ ದೊಡ್ಡ ಜವಾಬ್ದಾರಿ ಬಡವರ ಮೇಲಿದೆ. ಬಡತನ ನಿರ್ಮೂಲನೆ ಮಾಡುವುದಾಗಿ ಈ ಜನರು ತಲೆಮಾರುಗಳಿಂದ ಸುಳ್ಳು ಘೋಷಣೆಗಳನ್ನು ಮಾಡುತ್ತಿದ್ದಾರೆ' ಎಂದು ಮೋದಿ ಆರೋಪಿಸಿದ್ದಾರೆ.
ಬಡವರನ್ನು ಬಡತನದಲ್ಲೇ ಉಳಿಸುವ ಅಜೆಂಡಾವನ್ನು ಕಾಂಗ್ರೆಸ್ ಹೊಂದಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದಲ್ಲಿ ಬಹಳಷ್ಟು ಜನರು ಆಹಾರ, ಬಟ್ಟೆ ಮತ್ತು ವಸತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಕುರಿತಾಗಿ ತಮ್ಮ ಪ್ರೀತಿ ಬಗ್ಗೆಯೂ ಪ್ತಸ್ತಾಪಿಸಿದ ಮೋದಿ, ಇದು ಛತ್ರಪತಿ ಶಿವಾಜಿ ಮಹಾರಾಜರ ನೆಲವಾಗಿದೆ. 2013ರಲ್ಲಿ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ರಾಯಘಡ ಕೋಟೆಗೆ ತೆರಳಿ ದೇಶಕ್ಕಾಗಿ ದುಡಿಯಲು ಶಿವಾಜಿ ಮಹಾರಾಜರ ಆಶೀರ್ವಾದ ಪಡೆದೆ. ಶಿವಾಜಿ ನಮಗೆ ಸ್ವರಾಜ್ಯದ ಪಾಠ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಉತ್ತಮ ಆಡಳಿತದೊಂದಿಗೆ ಮುನ್ನಡೆಯಬೇಕು. ಕಾಂಗ್ರೆಸ್ಸಿಗರು ಜಾರ್ಖಂಡ್‌ನಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ನುಸುಳುಕೋರರು ಸೇರಿದಂತೆ ಎಲ್ಲರಿಗೂ ಉಚಿತ ಅಡುಗೆ ಅನಿಲ ನೀಡುವುದಾಗಿ ಭರವಸೆ ನೀಡಿದ್ಧಾರೆ. ನುಸುಳುಕೋರರನ್ನು ಬೆಂಬಲಿಸುವವರಿಗೆ ಅವಕಾಶ ನೀಡಬಹುದೇ? ದೇಶ ಮತ್ತು ನಿಮ್ಮ ಮಕ್ಕಳ ಉಜ್ವಲ ಭವಿಷ್ಯದ ಜೊತೆ ಅವರು ಆಡುತ್ತಿರುವ ಆಟಕ್ಕೆ ಇದೊಂದು ಉದಾಹರಣೆಯಾಗಿದೆ ಎಂದಿದ್ದಾರೆ.