ಕಾಸರಗೋಡು: ಮುಂಬೈಯ ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಹೆಸರಲ್ಲಿ ಕರೆಮಾಡಿ, ಕಾಸರಗೋಡಿನ ಕಾಂಗ್ರೆಸ್ ಮುಖಂಡರೊಬ್ಬರಿಂದ ಹಣ ಪೀಕಿಸಲು ಯತ್ನಿಸಲಾಗಿದೆ. ಹಣ ನೀಡದಿದ್ದಲ್ಲಿ, ಜೈಲಿಗಟ್ಟಲಾಗುವುದು ಎಂದೂ ಬೆದರಿಸಲಾಗಿದೆ.
ಐಕ್ಯರಂಗ ಜಿಲ್ಲಾ ಕಾರ್ಯದರ್ಶಿ ಎ.ಗೋವಿಂದನ್ ನಾಯರ್ ಅವರಿಗೆ ಈ ಬೆದರಿಕೆ ಕರೆ ಬಂದಿದೆ. ನಿಮ್ಮ ಮೊಬೈಲ್ ನಂಬರ್‍ನ ಆಧಾರ್ ಕಾರ್ಡು ನಂಬರ್ ಬಳಸಿ, ನ.2ರಂದು ಮುಂಬೈಯಲ್ಲಿ ಸಿಮ್‍ಕಾರ್ಡು ಪಡೆಯಲಾಗಿದೆ. ಈ ಸಿಮ್ ಮೂಲಕ ಕಾನೂನುಬಾಹಿರ ಚಟುವಟಿಕೆ ನಡೆಸಲಾಗಿದ್ದು, ಈ ಸಂಬಂಧ 17ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಕರೆಮಾಡಿದ ವ್ಯಕ್ತಿ ತಿಳಿಸಿದ್ದಾನೆ. ನಿಮ್ಮ ಫೋನ್ ಕೆಲವೇ ನಿಮಿಷದಲ್ಲಿ ಕ್ಯಾನ್ಸಲ್ ಆಗಲಿದ್ದು, ಬಳಿಕ ಮುಂಬೈ ಪೊಲೀಸರಿಗೆ ಇದರ ಸಂಪರ್ಕ ಪಡೆಯಲಿದ್ದಾರೆ. ಇದನ್ನು ತಪ್ಪಿಸಲು ಮುಂಬೈ ಪೊಲೀಸರ ಮುಂದೆ ಹಾಜರಾಗಬೇಕು, ಇಲ್ಲವಾದಲ್ಲಿ ಹಣ ಮುಂಬೈ ಪೊಲೀಸರ ಜತೆ ಹಾಟ್‍ಲೈನ್ ಮೂಲಕ ಮಾತನಾಡಿ. ಇದಕ್ಕಾಗಿ ಫೋನ್ ಸಂಪರ್ಕಿಸಿ ನೀಡುವುದಾಗಿ ಕರೆಮಾಡಿದ್ದ ವ್ಯಕ್ತಿ ತಿಳಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ಪ್ರಶ್ನೆ ಮಾಡಿದ ಗೋವಿಂದನ್ ನಾಯರ್, ಇದರ ಎಫ್‍ಐಆರ್ ಪ್ರತಿಯನ್ನು ಕಳುಹಿಸಿಕೊಡುವಂತೆ ತಿಳಿಸಿದಾಗ ವ್ಯಕ್ತಿ ಕರೆ ಕಟ್‍ಮಾಡಿದ್ದಾನೆ. ಯಾರನ್ನಾದರೂ ವಿಶ್ವಾಸಕ್ಕೆ ಬರುವ ರೀತಿಯಲ್ಲಿ ಕರೆಮಾಡಿದ ವ್ಯಕ್ತಿ ವ್ಯವಹರಿಸಿದ್ದು, ಇಂತಹ ಜಾಲಕ್ಕೆ ಬೀಳುವ ಮೊದಲು ಜಾಗ್ರತೆ ಪಾಲಿಸುವಂತೆಯೂ ಗೋವಿಂದನ್ ತಿಳಿಸಿದ್ದಾರೆ.