ಭಾರತ, ಪ್ಯಾಲೆಸ್ಟೀನ್‌ನಲ್ಲಿ ಮನೆಗಳ ನೆಲಸಮ ಕಾರ್ಯಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿರುವ ಕಂಪನಿಯು ಪಾತ್ರವು ಪ್ರಮುಖವಾಗಿದೆ ಎಂದೂ ಉಲ್ಲೇಖಿಸಿದ್ದಾರೆ.
ಭಾರತದ ವಿವಿಧ ರಾಜ್ಯಗಳಲ್ಲಿ ಮುಸಲ್ಮಾನರ ಮನೆಗಳು, ಅಂಗಡಿಗಳು, ಪ್ರಾರ್ಥನಾ ಸ್ಥಳಗಳ ನೆಲಸಮದ ವ್ಯವಸ್ಥಿತ ಅಭಿಯಾನಕ್ಕೆ ಬಿಜೆಪಿ ಸರ್ಕಾರವು ಜೆಸಿಬಿ ಬುಲ್ಡೋಜರ್‌ಗಳನ್ನೇ ಬಳಸುತ್ತಿದೆ. ಸದ್ಯ, ಚಾಲ್ತಿಯಲ್ಲಿರುವ ಈ ನೆಲಸಮ ಕಾರ್ಯವನ್ನು 'ಬುಲ್ಡೋಜರ್ ನ್ಯಾಯ' ಎಂದೇ ಬಣ್ಣಿಸಲಾಗುತ್ತಿದೆ' ಎಂದೂ ಈ ಕುರಿತ ಬಹಿರಂಗ ಪತ್ರದಲ್ಲಿ ಖಂಡಿಸಿದ್ದಾರೆ.
ಉಲ್ಲೇಖಿತ ಜೆಸಿಬಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನವೆಂಬರ್ 23ಕ್ಕೆ ಪ್ರಕಟಿಸಲಿದ್ದು, ಅದಕ್ಕೆ ಎರಡು ದಿನ ಮೊದಲು ಈ ಹೇಳಿಕೆ ಬಿಡುಗಡೆಯಾಗಿದೆ.
ಕವಿ, ವಿಮರ್ಶಕ ಕೆ.ಸಚ್ಚಿದಾನಂದನ್, ಕವಿ ಮತ್ತು ಪ್ರಕಾಶಕ ಅಸಾದ್ ಜೈದಿ, ಕವಿ ಜಸಿಂತಾ ಕೆರ್ಕೆಟ್ಟಾ, ಕವಿ ಮತ್ತು ಕಾದಂಬರಿಕಾರರಾದ ಮೀನಾ ಕಂದಸ್ವಾಮಿ, ಕವಿ ಮತ್ತು ಹೋರಾಟಗಾರ ಸಿಂಥಿಯಾ ಸ್ಟೀಫನ್ ಮತ್ತು ಇತರೆ ಬರಹಗಾರರು ಸಹಿ ಹಾಕಿದ್ದಾರೆ.
ಜೆಸಿಬಿ (ಇಂಡಿಯಾ) ಸಂಸ್ಥೆಯು ಬ್ರಿಟನ್‌ನ ಬ್ರಿಟಿಷ್ ನಿರ್ಮಾಣ ಪರಿಕರಗಳ ತಯಾರಿಕಾ ಸಂಸ್ಥೆಯಾಗಿರುವ ಜೆ.ಸಿ.ಬ್ಯಾಂಫೋರ್ಡ್ ಎಕ್ಸ್‌ಕೆವೇಟರ್ಸ್ ಲಿಮಿಟೆಡ್ (ಜೆಸಿಬಿ)ಯ ಅಂಗ ಸಂಸ್ಥೆಯಾಗಿದೆ. ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷಕ್ಕೆ ನೆರವು ನೀಡುವ ಪ್ರಮುಖ ಸಂಸ್ಥೆಯಾಗಿದೆ ಎಂದು ಸಾಹಿತಿಗಳು,ಪ್ರಕಾಶಕರು ಪತ್ರದಲ್ಲಿ ಉಲ್ಲೆಖಿಸಿದ್ದಾರೆ.
'ಹಿಂದೂ ಪರಮಾಧಿಕಾರ ಸಂಸ್ಥೆಗಳು ಭಾರತದಲ್ಲಿ ಜೆಸಿಬಿ ಪರಿಕರಗಳನ್ನು ಬಳಸುವುದು ಈ ದೃಷ್ಟಿಯಿಂದ ಆಶ್ಚರ್ಯದ ಸಂಗತಿ ಏನೂ ಅಲ್ಲ' ಎಂದು ಟೀಕಿಸಿದ್ದಾರೆ. ಜೆಸಿಬಿ ಏಜೆಂಟರು ಮತ್ತು ಇಸ್ರೇಲ್ ಸೇನೆ ನಡುವಣ ಒಪ್ಪಂದದ ಕಾರಣ ಪ್ಯಾಲೆಸ್ಟೀನ್‌ನಲ್ಲಿ ಜೆಸಿಬಿ ಬುಲ್ಡೋಜರ್‌ಗಳನ್ನು ನೆಲಸಮ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ.
ನಿರ್ಲಕ್ಷ್ಯಿತ ಮತ್ತು ವೈವಿಧ್ಯ ಲೇಖಕರಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಜೆಸಿಬಿ ಈ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅದೇ ಸಮಯದಲ್ಲಿ 'ದಂಡನೆ'ಯ ರೂಪದಲ್ಲಿ ಹಲವರ ಬದುಕನ್ನು ನಾಶಗೊಳಿಸುತ್ತಿದೆ ಎಂದು ಟೀಕಿಸಿದ್ದಾರೆ.
ಲೇಖಕರು, ಸಾಹಿತಿಗಳಾಗಿ ಇಂತಹ ಅಪಾಯಕಾರಿಯಾದ ಪ್ರತಿಪಾದನೆಗೆ ಒತ್ತಾಸೆಯಾಗಿ ನಿಲ್ಲಲು ಮತ್ತು ಬೆಂಬಲಿಸಲು ಆಗದು. ಜೆಸಿಬಿಗೆ ಮೆತ್ತಿರುವ ರಕ್ತದ ಕಲೆಗಳನ್ನು ಇಂತಹ ಪ್ರಶಸ್ತಿಯ ಮೂಲಕ ಅಳಿಸಲಾಗದು. ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಲೇಖಕರು ಇನ್ನೂ ಉತ್ತಮವಾದುದಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದೆ.
ಲೇಖಕ, ಪತ್ರಕರ್ತ ಜಿಯಾ ಉಸ್ ಸಲಾಂ ಅವರು, 'ಜೆಸಿಬಿ ಎಂಬುದು ಸರ್ಕಾರಿ ಪ್ರಾಯೋಜಕತ್ವದ ದ್ವೇಷ ಭಾವನೆಯ ಪ್ರತೀಕವಾಗಿದೆ. ಇದು, ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧದ ಧ್ವನಿಯಾಗಿದೆ' ಎಂದು ಈ ವಿರೋಧವನ್ನು ಬಣ್ಣಿಸಿದ್ದಾರೆ.