ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ಖ್ಯಾತ ಟಿವಿ ನಿರೂಪಕಿ ಎಲೆನ್ ಡಿಜನರ್ಸ್ ಅಮೆರಿಕ ತೊರೆದು ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಚುಟುಕು ಹಾಸ್ಯದಿಂದಲೇ ಅಮೆರಿಕದಲ್ಲಿ ಮನೆ ಮಾತಾಗಿರುವ ಎಲೆನ್, ನಟನೆ, ಬರವಣಿಗೆ ಮತ್ತು ನಿರ್ಮಾಪಕಿಯಾಗಿಯೂ ಸೈ ಎನಿಸಿಕೊಂಡಿದ್ದರು.
ದಿ ಎಲೆನ್ ಶೋ' ಅವರಿಗೆ ಅತ್ಯಂತ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾರ್ಯಕ್ರಮವಾಗಿದೆ. ಹಾಲಿವುಡ್‌ನ ಪ್ರಮುಖ ಕಲಾವಿದರು, ಪಾಪ್ ತಾರೆಯರು, ಖ್ಯಾತ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
86ನೇ ಆಸ್ಕರ್ ಪ್ರಶಸ್ತಿ ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನೂ ಎಲೆನ್ ನಿರ್ವಹಿಸಿದ್ದರು.
ನವೆಂಬರ್ 5ರಂದು ಅಮೆರಿಕದಲ್ಲಿ ಚುನಾವಣೆ ನಡೆದಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಎಲೆನ್ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು. 'ಕಮಲಾ ಹ್ಯಾರಿಸ್ ಅವರೇ ನಮ್ಮ ಮುಂದಿನ ಅಧ್ಯಕ್ಷರು' ಎಂದೂ ಘೋಷಿಸಿದ್ದರು. ಆದರೆ, ಫಲಿತಾಂಶ ಬೇರೆಯದೇ ಆಗಿತ್ತು.
ಚುನಾವಣಾ ಫಲಿತಾಂಶದ ಬೆನ್ನಲ್ಲೇ ಮಾಂಟೆಸಿಟೋದಲ್ಲಿರುವ ತಮ್ಮ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದು, ತಮ್ಮ ಸಂಗಾತಿ ಪೋರ್ಟಿಯಾ ಡಿ ರೊಸ್ಸಿ ಅವರೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದಾರೆ ಎಂದು ಟಿಎಂಡಬ್ಲ್ಯೂ ಡಾಟ್ ಕಾಮ್ ವರದಿ ಮಾಡಿದೆ.
ಟ್ರಂಪ್ ನೀತಿಗಳು ದೇಶದ ಭವಿಷ್ಯಕ್ಕೆ ಮಾರಕವಾಗಿದೆ ಎಂಬ ಕಾರಣ ನೀಡಿ ಎಲೆನ್ ಮಾತ್ರವಲ್ಲದೇ ಹಲವಾರು ಹಾಲಿವುಡ್ ತಾರೆಯರು ಅಮೆರಿಕ ತೊರೆದಿದ್ದಾರೆ ಎಂದೂ ವರದಿ ಮಾಡಿದೆ.
ಜನಪ್ರಿಯ ತಾರೆಯರಾದ ಇವಾ ಲಾಂಗೋರಿಯಾ, ಗಿಲ್ಲೆರ್ಮೊ ರೊಡ್ರಿಗಸ್, ಶರೋನ್ ಸ್ಟೋನ್, ಬಾರ್ಬ್ರಾ ಸ್ಟ್ರೈಸೆಂಡ್, ಲಾವೆರ್ನೆ ಕಾಕ್ಸ್, ಮಿನ್ನೀ ಡ್ರೈವರ್ ಮತ್ತು ರಾವೆನ್-ಸೈಮೋನ್ ಅಮೆರಿಕ ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದೆ.